ರಾಜ್ಯದಲ್ಲಿ ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ಶೀಘ್ರದಲ್ಲೇ ರಾಜೀನಾಮೆ ನೀಡಲಿದ್ದಾರೆ ಎಂಬ ವಿಚಾರ ಗುಟ್ಟಾಗಿ ಉಳಿದಿಲ್ಲ. ಪಕ್ಷದಲ್ಲಿ ಆಂತರಿಕ ಭಿನ್ನಮತ, ಪಕ್ಷ ಸಂಘಟನೆ ಹೀಗೆ ನಾನಾ ಕಾರಣಗಳನ್ನ ಮುಂದಿಟ್ಟು ಹೈಕಮಾಂಡ್ ಯಡಿಯೂರಪ್ಪ ರಾಜೀನಾಮೆ ನೀಡುವಂತೆ ಸೂಚನೆ ನೀಡಿದೆ ಎನ್ನಲಾಗಿದೆ.
ರಾಜ್ಯದಲ್ಲಿ ಯಡಿಯೂರಪ್ಪರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸೋದು ಬಿಜೆಪಿಗೆ ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಪಕ್ಷವನ್ನ ಅಧಿಕಾರಕ್ಕೆ ತರಲು ಹಗಲಿರುಳು ಶ್ರಮಿಸಿರುವ ಬಿಎಸ್ವೈರಿಂದಲೇ ರಾಜೀನಾಮೆ ಪಡೆಯಲು ಮುಂದಿರುವ ಹೈಕಮಾಂಡ್ ಲೆಕ್ಕಾಚಾರಗಳೇನು..? ಬಿಎಸ್ವೈ ರಾಜೀನಾಮೆ ಬಳಿಕವೂ ವೋಟ್ ಬ್ಯಾಂಕ್ ಕಾಪಾಡಿಕೊಳ್ಳಲು ಪಕ್ಷ ಯಾವೆಲ್ಲ ಲೆಕ್ಕಾಚಾರ ಹೊಂದಿರಬಹುದು ಎಂಬುದೆಲ್ಲಾ ಕುತೂಹಲ ಕೆರಳಿಸಿದೆ.
ಯಡಿಯೂರಪ್ಪ ಲಿಂಗಾಯತರ ನಾಯಕ ಎಂದೇ ಹೆಚ್ಚು ಖ್ಯಾತಿ ಗಳಿಸಿದಂತವರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಲಿಂಗಾಯತ ಸಮುದಾಯದ ಪಾತ್ರ ಅತ್ಯಂತ ಪ್ರಮುಖವಾದದ್ದು. ಇಂತಹ ಸಂದರ್ಭದಲ್ಲಿ ಸಿಎಂ ಸ್ಥಾನದಿಂದ ಯಡಿಯೂರಪ್ಪ ಕೆಳಗೆ ಇಳಿದಲ್ಲಿ ಲಿಂಗಾಯತ ಸಮುದಾಯದಲ್ಲಿ ಏಳುವ ಬಿಜೆಪಿ ವಿರೋಧಿ ಅಲೆಗೆ ಹೈಕಮಾಂಡ್ ಯಾವ ರೀತಿ ಟಾನಿಕ್ ನೀಡುತ್ತೆ ಅನ್ನೋದು ಯಕ್ಷ ಪ್ರಶ್ನೆಯಾಗಿದೆ.
ಯಡಿಯೂರಪ್ಪ ರಾಜೀನಾಮೆ ಬಳಿಕ ಸಿಎಂ ಸ್ಥಾನಕ್ಕೆ ಸಾಕಷ್ಟು ಹೆಸರು ಕೇಳಿ ಬರ್ತಿದೆ. ಲಿಂಗಾಯತ ಸಮುದಾಯದ ಕೋಪವನ್ನ ತಣಿಸುವ ಸಲುವಾಗಿ ಬಿಜೆಪಿ ಮತ್ತೊಮ್ಮೆ ಲಿಂಗಾಯತ ನಾಯಕನನ್ನೇ ಸಿಎಂ ಮಾಡುತ್ತಾ..? ಅಥವಾ ಲಿಂಗಾಯತೇತರ ನಾಯಕನಿಗೆ ಮುಖ್ಯಮಂತ್ರಿ ಗಾದಿ ನೀಡಿ ಯಡಿಯೂರಪ್ಪರಿಗೆ ಪಕ್ಷದಲ್ಲಿ ಅತ್ಯುನ್ನತ ಸ್ಥಾನ ನೀಡುತ್ತಾ ಎಂಬ ಗುಮಾನಿಯೂ ರಾಜಕೀಯ ವಲಯದಲ್ಲಿ ಹರಿದಾಡ್ತಿದೆ.
ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಸಮುದಾಯವೇ ಬಿಜೆಪಿಯ ವೋಟ್ ಬ್ಯಾಂಕ್. ಇತ್ತ ದಕ್ಷಿಣ ಕರ್ನಾಟಕವೂ ಬಿಜೆಪಿಯ ಪರ ವಾಲುತ್ತಿದೆ. ಹೀಗಾಗಿ ಇವರೆಡರ ಸಮತೋಲ ಕಾಪಾಡುವುದು ಸಹ ಬಿಜೆಪಿ ವರಿಷ್ಠರ ಮುಂದಿರುವ ಮತ್ತೊಂದು ಸವಾಲಾಗಿದೆ.