ಟ್ರಾಫಿಕ್ ನಿಂದ ತಪ್ಪಿಸಿಕೊಳ್ಳಲು ನದಿಯಲ್ಲಿ ಮಹೀಂದ್ರಾ ಥಾರ್ ಚಲಾಯಿಸಿದ ಪ್ರವಾಸಿಗನಿಗೆ ಹಿಮಾಚಲ ಪ್ರದೇಶದ ಪೊಲೀಸರು ನೋಟಿಸ್ ನೀಡಿದ್ದಾರೆ. ಕ್ರಿಸ್ ಮಸ್ ಮತ್ತು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಹಿಮಾಚಲದ ಪ್ರದೇಶದ ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಯ ಗಿರಿಧಾಮಗಳಿಗೆ ಹೆಚ್ಚಿನ ಪ್ರವಾಸಿಗರು ಆಗಮಿಸಿದ್ದರು.
ಈ ವೇಳೆ ಹೆಚ್ಚಿನ ವಾಹನ ಸಂಚಾರದಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದ ತಪ್ಪಿಸಿಕೊಳ್ಳಲು ಪ್ರವಾಸಿಗರೊಬ್ಬರು ತನ್ನ ಮಹೀಂದ್ರಾ ಥಾರ್ ಎಸ್ ಯು ವಿ ಯನ್ನು ಸೋಮವಾರ ಸಂಜೆ ಲಾಹೌಲ್ ಮತ್ತು ಸ್ಪಿತಿ ಪ್ರದೇಶದಲ್ಲಿನ ಚಂದ್ರ ನದಿಯಲ್ಲಿ ಚಲಾಯಿಸಿದ್ದರು. ಇದನ್ನು ಅಲ್ಲಿದ್ದ ಪ್ರವಾಸಿಗರು ಸೆರೆಹಿಡಿದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಬಳಿಕ ವೈರಲ್ ಆಗಿತ್ತು. ಇದನ್ನು ಗಮನಿಸಿದ ಹಿಮಾಚಲ ಪೊಲೀಸರು ನೋಟಿಸ್ ನೀಡಿದ್ದಾರೆ.
“ಇತ್ತೀಚೆಗೆ, ಲಾಹೌಲ್ ಸ್ಪಿತಿ ಜಿಲ್ಲೆಯಲ್ಲಿ ಮಹೀಂದ್ರಾ ಥಾರ್ ಕಾರ್ ಚಂದ್ರ ನದಿಯನ್ನು ದಾಟುವ ವಿಡಿಯೋ ವೈರಲ್ ಆಗಿತ್ತು. ಮೋಟಾರು ವಾಹನ ಕಾಯ್ದೆ 1988 ರ ಅಡಿಯಲ್ಲಿ ಇದನ್ನು ಪ್ರಶ್ನಿಸಲಾಗಿದೆ. ಈ ರೀತಿ ಯಾರೂ ಮಾಡಬಾರದು. ಘಟನೆ ನಡೆದ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಭವಿಷ್ಯದಲ್ಲಿ ಇಂತಹ ಅಪರಾಧವನ್ನು ಯಾರೂ ಮಾಡಬಾರದು” ಎಂದು ಎಸ್ಪಿ ಮಯಾಂಕ್ ಚೌಧರಿ ಹೇಳಿದ್ದಾರೆ.
ಕ್ರಿಸ್‌ಮಸ್ ಮತ್ತು ಹೊಸ ವರ್ಷವನ್ನು ಆಚರಿಸಲು ಹೆಚ್ಚುವರಿ ಪ್ರವಾಸಿಗರು ಆಗಮಿಸುವುದರಿಂದ ಹಿಮಾಚಲ ಪ್ರದೇಶದ ಹಲವಾರು ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ರಸ್ತೆಗಳು ಗಣನೀಯ ಟ್ರಾಫಿಕ್ ದಟ್ಟಣೆಯನ್ನು ಕಾಣುತ್ತಿವೆ. ಲಾಹೌಲ್ ಮತ್ತು ಸ್ಪಿತಿ ಪ್ರದೇಶದಲ್ಲಿ ಪೊಲೀಸರು ಡ್ರೋನ್ ಕಣ್ಗಾವಲು ಟ್ರಾಫಿಕ್ ಪರಿಸ್ಥಿತಿಗಳನ್ನು ಮೇಲ್ವಿಚಾರಣೆ ಮಾಡಲು ಡ್ರೋಣ್ ಬಳಸಿದ್ದಾರೆ.