ಸಿಟ್ರಸ್ ವರ್ಗಕ್ಕೆ ಸೇರಿದ ಯಾವುದೇ ಹಣ್ಣು ವಿಟಮಿನ್ ಸಿ ಯ ಆಗರ. ನಿಂಬೆ, ಕಿತ್ತಳೆ, ಮೂಸಂಬಿ, ಎಳ್ಳಿ ಕಾಯಿಯ ಸಾಲಿಗೆ ಸೇರುವ ಮತ್ತೊಂದು ಹಣ್ಣು ಚಕ್ಕೋತಾ.
ನೋಡಲು ಮೂಸಂಬಿ ಹಣ್ಣನ್ನು ಹೋಲುತ್ತದೆ ಆದರೂ ಗಾತ್ರದಲ್ಲಿ ಈ ಎಲ್ಲಾ ಹಣ್ಣುಗಳನ್ನು ಮೀರಿಸುತ್ತದೆ. ಈ ಹಣ್ಣನ್ನು ಎಲ್ಲೇ ಕಂಡರೂ ಖರೀದಿಸಿ ತಂದು ತಿನ್ನಿ. ಕಾರಣ ಇದರಲ್ಲಿ ಸಿ ವಿಟಮಿನ್ ಹೆಚ್ಚಾಗಿ ಇದೆ ಅಂತಷ್ಟೇ ಅಲ್ಲ. ತೂಕ ಕಳೆದುಕೊಳ್ಳಲು ಬಯಸುವವರಿಗೆ ಇದು ಜಾದೂ ಮಾಡಬಲ್ಲ ಹಣ್ಣು. ಯಾವುದೇ ಅಡ್ಡಪರಿಣಾಮಗಳಿಲ್ಲದೆ ಸುಲಭವಾಗಿ ಬಳುಕುವ ಬಳ್ಳಿಯ ಹಾಗೆ ನೀವು ಕಾಣಬಹುದು.
ಚಕ್ಕೋತ ಹಣ್ಣು ಗುಲಾಬಿ ಹಾಗೂ ಬಿಳಿ ಬಣ್ಣದಲ್ಲಿ ಸಿಗುತ್ತದೆ. ಯಾವುದೇ ಹಣ್ಣಾದರೂ ಸರಿ, ಇದರ ತೊಳೆಗಳನ್ನು ಬಿಡಿಸಿ, ಉಪ್ಪು ಹಾಗೂ ಚಾಟ್ ಪೌಡರ್ ಬಳಸಿ ಜ್ಯೂಸ್ ಮಾಡಿ ಕುಡಿದರೆ ಇದರ ಮ್ಯಾಜಿಕ್ ನಿಮಗೆ ಕೆಲವೇ ದಿನಗಳಲ್ಲಿ ಅನುಭವಕ್ಕೆ ಬರುತ್ತದೆ.
ಸಿಟ್ರಸ್ ಮ್ಯಾಕ್ಸಿಮಾ ವೈಜ್ಞಾನಿಕ ಹೆಸರು. ಹುಳಿ, ಒಗರು ಮಿಶ್ರಿತ ಇದರ ರುಚಿ ಯಾವುದೇ ಹಣ್ಣಿಗೆ ಸಮ ಅಲ್ಲ. ಪದೇ ಪದೇ ಬಾಯಿಹುಣ್ಣು ಆಗುವ ಸಮಸ್ಯೆ ಇರುವವರೂ ಈ ಹಣ್ಣನ್ನು ಟ್ರೈ ಮಾಡಬಹುದು. ಒಮ್ಮೆಲೆ ಇಡೀ ಹಣ್ಣನ್ನು ತಿನ್ನಲಾಗದೇ ಹೋದರೂ ಒಂದೆರಡು ಎಸಳುಗಳಲ್ಲೇ ಸಾಕಷ್ಟು ಸತ್ವ ಕೊಡುವ ಚಕ್ಕೋತ ಸವಿಯುತ್ತಾ ಆರೋಗ್ಯದ ಲಾಭ ಪಡೆದುಕೊಳ್ಳಿ.