ಹಿಂದೆ ಗಣೇಶ ಹಬ್ಬ ಬಂತೆಂದರೆ ಸಾಕು ಮನೆ ಮಂದಿಯಲ್ಲಾ ಸೇರಿ ಚಕ್ಕುಲಿ, ಕಜ್ಜಾಯ ಹೀಗೆ ವಿವಿಧ ತಿನಿಸುಗಳನ್ನು ಮಾಡಲು ವಾರದಿಂದ ತಯಾರಿ ನಡೆಸುತ್ತಿದ್ದರು. ಅದರಲ್ಲಿಯೂ ಚಕ್ಕುಲಿ ಮಾಡುವುದು ಎಂದರೆ ಅದೊಂದು ಸಾಹಸವೇ ಆಗಿತ್ತು.
ಅಕ್ಕಿ ತೊಳೆದು ಒಣಗಿಸುವುದು, ಒರಳು ಕಲ್ಲಿನಲ್ಲಿ ಅಕ್ಕಿ ಬೀಸಿ ಹಿಟ್ಟು ತಯಾರಿಸುವುದು, ಬಳಿಕ ಹಿಟ್ಟು ಕಲಸುವುದೇ ಒಂದು ದೊಡ್ಡ ಸವಾಲು…. ಅದಾದ ಮೇಲೆ ಚಕ್ಕುಲಿ ಒತ್ತುವುದಂತು ಹರಸಾಹಸ…..
ಮನೆ ಮಂದಿಗೆಲ್ಲ ಚಕ್ಕುಲಿ ಸವಿಯುವ ಸಂಭ್ರಮ ತಯಾರಿಸುವ ವೇಳೆಗೆ ಸುಸ್ತಾಗಿ ಹೋಗುತ್ತಿತ್ತು. ಆದರೆ ಬದಲಾದ ಕಾಲಘಟ್ಟ, ಆಧುನಿಕ ಜೀವನ ಶೈಲಿಗೆ ತಕ್ಕಂತೆ ಅಡುಗೆ ವಿಧಾನ, ಪದ್ಧತಿ, ಆಚರಣೆಗಳೆಲ್ಲವೂ ಬದಲಾಗಿದೆ. ಅಂತೆಯೇ ಚಕ್ಕುಲಿ ತಯಾರಿಗೂ ಈಗ ಯಂತ್ರೋಪಕರಣಗಳು ಬಂದಿವೆ. ಇನ್ನೂ ವಿಶೇಷವೆಂದರೆ ಚಕ್ಕುಲಿ ತಯಾರಿಕೆಗಾಗಿಯೇ ಫ್ಯಾಕ್ಟರಿಗಳು ಓಪನ್ ಆಗಿದ್ದು, ಕ್ಷಣ ಮಾತ್ರದಲ್ಲೇ ರುಚಿ ರುಚಿಯಾದ ಗರಿಗರಿ ಚಕ್ಕುಲಿ ನಮ್ಮ ಮುಂದೆ ಲಭ್ಯವಾಗುತ್ತೆ.
ಚಕ್ಕುಲಿ ಫ್ಯಾಕ್ಟರಿಯಲ್ಲಿ ಯಂತ್ರೋಪಕರಣಗಳಲ್ಲಿ ಹೇಗೆಲ್ಲ ಚಕ್ಕುಲಿ ತಯಾರಾಗುತ್ತೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಿಂದೆ ಹಬ್ಬಗಳ ಸಂದರ್ಭದಲ್ಲಿ ಕುಟುಂಬದವರೆಲ್ಲ ಸೇರಿ ಚಕ್ಕುಲಿ ತಯಾರಿಕೆಗೆ ಪಡುತ್ತಿದ್ದ ಶ್ರಮ ಈಗ ಪಡಬೇಕಿಲ್ಲ. ಯಂತ್ರೋಪಕರಣಗಳ ಸಹಾಯದಿಂದ ಎಷ್ಟು ಸಲೀಸಾಗಿ ಕೆಲವೆ ಸಮಯಗಳಲ್ಲಿ ಗರಿ ಗರಿ ಚಕ್ಕುಲಿ ತಯಾರಾಗಿ ಸವಿಯಲು ಸಿದ್ಧವಾಗಿಬಿಡುತ್ತೆ.
ಆದರೆ ಹೀಗೆ ಫ್ಯಾಕ್ಟರಿಯಲ್ಲಿ ಚಕ್ಕುಲಿ ತಾಯಾರಿಸುವ ವೇಳೆ ಶುಚಿತ್ವದ ಬಗ್ಗೆ, ಜೊತೆಗೆ ಅಲ್ಲಿನ ಸಿಬ್ಬಂದಿಗಳ ಸುರಕ್ಷತೆ ಬಗ್ಗೆ ಯಾವುದೇ ಮುಂಜಾಗೃತಾ ಕ್ರಮ ವಹಿಸದಿರುವುದು ಬೇಸರದ ಸಂಗತಿ. ಹೊಗೆಯಾಡಲೂ ಜಾಗವಿಲ್ಲದಂತಹ ಸ್ವಚ್ಛತೆ ಇಲ್ಲದ ಸ್ಥಳದಲ್ಲಿ ತಯಾರಾಗುವ ಚಕ್ಕುಲಿ, ಕುರುಕ್ ತಿಂಡಿ, ಯಾವುದೇ ಇರಲಿ ಸವಿಯುವ ಗ್ರಾಹಕರ ಆರೋಗ್ಯದ ಗತಿ ಏನಾಗಬೇಕು…? ಖರೀದಿಸುವ ಮೊದಲು ಒಮ್ಮೆ ಈ ಯೋಚನೆ ಬಂದರೂ ಅಂಗಡಿಗಳಲ್ಲಿ ಸಿಗುವ ಕುರುಕ್ ತಿಂಡಿ ಬಗೆಗಿನ ಆಸಕ್ತಿ, ಬಾಯಿರುಚಿಯಂತು ಕಡಿಮೆಯಾಗಲ್ಲ. ಖರೀದಿಸುವುದನ್ನೂ ಬಿಡಲ್ಲ.