ಉಡುಪಿ: ಉದ್ಯಮಿಗೆ ಟಿಕೆಟ್ ಕೊಡಿಸುವುದಾಗಿ ಹೇಳಿ ಕೋಟ್ಯಂತರ ರೂಪಾಯಿ ವಂಚಿಸಿದ್ದ ಹಿಂದೂ ಹೋರಾಟಗಾರ್ತಿ ಚೈತ್ರಾ ಕುಂದಾಪುರ ಹಾಗೂ ಗ್ಯಾಂಗ್ ನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಆಕೆಯ ಬಂಧನದ ಬಳಿಕ ಒನ್ನೊಂದೇ ವಿಚಾರಗಳು ಬಹಿರಂಗವಾಗುತ್ತಿವೆ.
ಇಷ್ಟಕ್ಕೂ ಚೈತ್ರಾ ಕುಂದಾಪುರಳ ಪ್ರಖ್ಯಾತಿಗೆ ಕಾರಣವೇನು ಎಂಬ ಅಂಶವನ್ನು ಹುಡುಕುತ್ತಾ ಹೋದರೆ ಕೇಂದ್ರ ಸಚಿವೆಯೊಬ್ಬರು ಮಾಡಿದ್ದ ಆ ಟ್ವೀಟ್ ಎಂಬುದು ಕುತೂಹಲ ಮೂಡಿಸುತ್ತದೆ. ಚೈತ್ರಾ ಕುಂದಾಪುರ ಖ್ಯಾತಿಗೆ ಕಾರಣವಾಗಿದ್ದ ಟ್ವೀಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಹಾಗಾದರೆ ಕೇಂದ್ರ ಸಚಿವೆ ಮಾಡಿದ್ದ ಆ ಟ್ವೀಟ್ ಯಾವುದು? ಚೈತ್ರಾ ಕುಂದಾಪುರಳನ್ನು ಕೇಂದ್ರ ಸಚಿವೆ ಶ್ಲಾಘಿಸಲು ಕಾರಣವಾಗಿದ್ದ ಆ ಸಂದರ್ಭ ಏನು? ಇಲ್ಲಿದೆ ಮಾಹಿತಿ.
2018ರಲ್ಲಿ ಕಾಂಗ್ರೆಸ್ ಹಾಗೂ ಎರಡಪಕ್ಷಗಳು ಕರೆ ನೀಡಿದ್ದ ಭಾರತ್ ಬಂದ್ ನ್ನು ವಿರೋಧಿಸಿದ್ದ ಚೈತ್ರಾ ಕುಂದಾಪುರ, ಉಡುಪಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜೊತೆ ವಾಗ್ವಾದಕ್ಕಿಳಿದಿದ್ದಳು. ಅಂಗಡಿ-ಮುಂಗಟ್ಟು ಬಂದ್ ಮಾಡುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡಿದ್ದಳು. ಪ್ರಧಾನಿ ಮೋದಿ ಪರ ಘೋಷಣೆ ಕೂಗಿ ಅಬ್ಬರಿಸಿದ್ದಳು. ಕಾಂಗ್ರೆಸ್ ವಿರುದ್ಧ ಒಬ್ಬೊಂಟಿಯಾಗಿ ಹೋರಾಟ ನಡೆಸುತ್ತಿದ್ದ ಚೈತ್ರಾ ಕುಂದಾಪುರಳ ವಿಡಿಯೋ ಭಾರಿ ವೈರಲ್ ಆಗಿತ್ತು. ಇದನ್ನು ಬಿಜೆಪಿ ವರಿಷ್ಠರು, ಕೇಂದ್ರದ ನಾಯಕರು ಗಮನಿಸಿದ್ದರು.
ಚೈತ್ರಾ ಕುಂದಾಪುರಳ ಈ ಸಾಹಸ, ಧೈರ್ಯವನ್ನು ಕಂಡ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಸ್ವತಃ ಟ್ವೀಟ್ ಮೂಲಕ ಪ್ರಶಂಸಿದ್ದರು. ಚೈತ್ರಾ ಕುಂದಾಪುರಳನ್ನು ‘ಡೇರಿಂಗ್ ಗರ್ಲ್’ ಎಂದು ಕರೆದಿದ್ದರು. ಈ ಟ್ವೀಟ್ ನ್ನೇ ಪ್ಲಸ್ ಪಾಯಿಂಟ್ ಆಗಿ ತೆಗೆದುಕೊಂಡ ಚೈತ್ರಾ ಕುಂದಾಪುರ ತನಗೆ ಕೇಂದ್ರದ ನಾಯಕರ ಜೊತೆ ಲಿಂಕ್ ಇದೆ ಎಂಬ ರೀತಿಯಲ್ಲಿ ಬಿಂಬಿಸಿಕೊಳ್ಳಲಾರಂಭಿಸಿದ್ದಳು.
ಕೇಂದ್ರ ಸಚಿವೆ ಮಾಡಿದ್ದ ಈ ಟ್ವೀಟ್ ಮೂಲಕವೇ ಚೈತ್ರಾ ಕುಂದಾಪುರ ಪ್ರವರ್ಧಮಾನಕ್ಕೆ ಬಂದಿದ್ದು. ಆ ಬಳಿಕ ರಾಜ್ಯಾದ್ಯಂತ ತನ್ನ ಭಾಷಣಗಳ ಮೂಲಕವಾಗಿ ಹಾಗೂ ತಾನೊಬ್ಬ ಹಿಂದೂ ಹೋರಾಟಗಾರ್ತಿ, ಕೇಂದ್ರ ಸಚಿವರ ಸಂಪರ್ಕ ತನಗಿದೆ ಎಂಬ ರೀತಿಯಲ್ಲಿ ಬಿಂಬಿಸಿಕೊಳ್ಳುತ್ತಾ ಖ್ಯಾತಿ ಪಡೆದಳು. ಹೀಗೆ ಆರಂಭವಾದ ಚೈತ್ರಾ ಕುಂದಾಪುರ ಜನಪ್ರಿಯತೆ ಬಳಿಕ ಕಳೆದ ವಿಧಾನಸಭಾ ಚುನಾವಣೆ ವೇಳೆ ಬೈಂದೂರು ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಟಿಕೆಟ್ ಕೊಡಿಸುವುದಾಗಿ ಹೇಳಿ ನಂಬಿಕೆ ಹುಟ್ಟಿಸಿದ್ದಳು. ಚೈತ್ರಾ ಕುಂದಾಪುರಳ ಖ್ಯಾತಿ ಕಂಡು ನಂಬಿದ್ದ ಗೋವಿಂದ ಪೂಜಾರಿ ಎಂಎಲ್ಎ ಟಿಕೆಟ್ ಆಸೆಗಾಗಿ 5 ಕೋಟಿ ರೂಪಾಯಿ ನೀಡಿದ್ದರು. ಆದರೆ ಬೈಂದೂರು ಕ್ಷೇತ್ರದ ಟಿಕೆಟ್ ಗೋವಿಂದ ಪೂಜಾರಿಗೆ ಸಿಗದೇ ಬೇರೆಯವರ ಪಾಲಾದಾಗಲೇ ಗೋವಿಂದ ಪೂಜಾರಿಗೆ ತಾನು ಮೋಸ ಹೋದ ಸಂಗತಿ ಅರಿವಾಗಿದೆ. ಬಳಿಕ ಎಚ್ಚೆತ್ತ ಗೋವಿಂದ ಪೂಜಾರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದೀಗ ಚೈತ್ರಾ ಕುಂದಾಪುರ ಹಾಗೂ ಗ್ಯಾಂಗ್ ಬಂಧನವಾಗಿದ್ದು, ಚೈತ್ರಾಳ ಮತ್ತೊಂದು ಮುಖ ಬಯಲಾಗಿದೆ.