ಗದಗ: ಉದ್ಯಮಿಗೆ ವಿಧಾನಸಭಾ ಚುನಾವಣೆ ಟಿಕೆಟ್ ಕೊಡಿಸುವುದಾಗಿ ಹೇಳಿ 5 ಕೋಟಿ ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ಚೈತ್ರಾ ಕುಂದಾಪುರ ಹಾಗೂ ಗ್ಯಾಂಗ್ ನಲ್ಲಿ ಮೂರನೇ ಆರೋಪಿಯಾಗಿರುವ ಅಭಿನವ ಹಾಲಶ್ರೀ ವಿರುದ್ಧ ಮತ್ತೊಂದು ವಂಚನೆ ಕೇಸ್ ದಾಖಲಾಗಿದೆ.
ಅಭಿನವ ಹಾಲಶ್ರೀ 1 ಕೋಟಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಪಿಡಿಒ ಒಬ್ಬರು ಗದಗ ಜಿಲ್ಲೆಯ ಮುಂಡರಗಿ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕರ್ತವ್ಯ ಲೋಪದ ಆರೋಪದಲ್ಲಿ ಅಮಾನತುಗೊಂಡಿರುವ ಶಿರಹಟ್ಟಿ ತಾಲೂಕಿನ ರಣತೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂಜಯ ಚವಡಾಳ ಎಂಬುವವರು ಅಭಿನವ ಹಾಲಶ್ರೀ ಸ್ವಾಮೀಜಿ ವಿರುದ್ಧ ವಂಚನೆ ಆರೋಪ ಮಾಡಿ ಮುಂಡರಗಿ ಠಾಣೆ ಮೆಟ್ಟಿಲೇರಿದ್ದಾರೆ.
ಬಿಜೆಪಿಯಲ್ಲಿ ತುಂಬಾ ಪ್ರಭಾವಿ ಎಂದು ಗುರುತಿಸಿಕೊಂಡಿದ್ದ ಅಭಿನವ ಹಾಲಶ್ರೀ, ಶಿರಹಟ್ಟಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ 1 ಕೋಟಿ ಹಣ ಪಡೆದಿದ್ದಾರೆ. 50 ಲಕ್ಷ, 40 ಲಕ್ಷ ಹಾಗೂ 10 ಲಕ್ಷ ಹೀಗೆ ಮೂರು ಕಂತುಗಳಲ್ಲಿ ಒಟ್ಟು1 ಕೋಟಿ ಹಣವನ್ನು ಅಭಿನವ ಹಾಲಶ್ರೀಗೆ ನೀಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಸ್ವಾಮೀಜಿಗೆ ಹಣ ನೀಡಿದ ಬಗ್ಗೆ ಸೂಕ್ತ ದಾಖಲೆ ಒದಗಿಸುವಂತೆ ಪೊಲೀಸರು ಸಂಜಯ ಚವಡಾಳಗೆ ಸೂಚಿಸಿದ್ದಾರೆ. ಸಮರ್ಪಕ ದಾಖಲೆ ಇಲ್ಲದ ಕಾರಣ ಪೊಲೀಸರು ಎನ್ ಸಿ ದಾಖಲಿಸಿ ಕಳುಹಿಸಿದ್ದು, ದಾಖಲೆ ಒದಗಿಸುವಂತೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.