ಉಡುಪಿ: ಎಂಎಲ್ ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ 5 ಕೋಟಿ ವಂಚನೆ ಪ್ರಕರಣದಲ್ಲಿ ಸಿಸಿಬಿಯಿಂದ ಬಂಧಿಸಲ್ಪಟ್ಟಿರುವ ಹಿಂದೂ ಹೋರಾಟಗಾರ್ತಿ ಚೈತ್ರಾ ಕುಂದಾಪುರಳ ಹೊಸ ಹೊಸ ಪ್ರಕರಣಗಳು ದಿನವೂ ಹೊರಬರುತ್ತಿದೆ.
5 ಕೋಟಿ ವಂಚನೆ ಪ್ರಕರಣದ ಬೆನ್ನಲ್ಲೇ ಇದೀಗ ಚೈತ್ರಾ ಕುಂದಾಪುರ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ. ಬಟ್ಟೆ ಅಂಗಡಿ ಹಾಕಿಸಿಕೊಡುವುದಾಗಿ ನಂಬಿಸಿ 5 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಆರೊಪಿಸಿ, ಚಿತ್ರ ಕುಂದಾಪುರ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಸುದಿನ ಎಂಬುವವರು ದೂರು ದಾಖಲಿಸಿದ್ದಾರೆ.
2015ರಲ್ಲಿ ಚೈತ್ರಾ ಕುಂದಾಪುರ ಪರಿಚಯವಾಗಿದ್ದು, ತಾನು ಬಿಜೆಪಿಯಲ್ಲಿ ಉನ್ನತ ಸ್ಥಾನದಲ್ಲಿದ್ದು, ಸಚಿವರು, ಶಾಸಕರ ಪರಿಚವಿದೆ. ಕೋಟಾ ಹಾಗೂ ಉಡುಪಿಯಲ್ಲಿ ಬಟ್ಟೆ ಅಂಗಡಿ ಹಾಕಿ ಕೊಡುವುದಾಗಿ ಹೇಳಿದ್ದರು. ಇದೇ ಕಾರಣಕ್ಕೆ 2018ರಿಂದ 2022ವರೆಗೆ ಮೂರು ಲಕ್ಷ ರೂಪಾಯಿ ಹಾಗೂ 2023ವರೆಗೆ ಒಟ್ಟು 5 ಲಕ್ಷ ಹಣವನ್ನು ಆಕೆಯ ಖಾತೆಗೆ ವರ್ಗಾವಣೆ ಮಾಡಿದ್ದೇನೆ. ಆದರೆ ಬಟ್ಟೆ ಅಂಗಡಿ ಹಾಕಿ ಕೊಡದೇ ವಂಚಿಸಿದ್ದಾರೆ.
ಬಟ್ಟೆ ಅಂಗಡಿ ಬಗ್ಗೆ ಕೇಳಿದಾಗ ಈಗಷ್ಟೇ ಸ್ಥಳೀಯ ಮುಖಂಡರ ಜೊತೆ ಮಾತನಾಡಿದ್ದೇನೆ. ಅಂತಿಮ ಹಂತದಲ್ಲಿದೆ ಎಂದು ಹೇಳುತ್ತಾ ಚುನಾವಣೆ ಪ್ರಚಾರ, ಭಾಷಣ ಕಾರ್ಯಕ್ರಮ, ಕಾರ್ಯಕಾರಿಣಿ ಸಭೆ, ಪಕ್ಷದ ಮುಖಂಡರ ಭೇಟಿ ಹೀಗೆ ನೆಪಗಳನ್ನು ಹೇಳುತ್ತಾ ದಿನಗಳನ್ನು ಕಳೆಯುತ್ತಾ ಬಂದಿದ್ದಾಳೆ. ಅನುಮಾನಗೊಂಡು ಕೂಡಲೇ ಬಟ್ಟೆ ಅಂಗಡಿ ಹಾಕಿಕೊಡಿ ಇಲ್ಲವೇ ಕೊಟ್ಟ ಹಣವನ್ನು ವಾಪಸ್ ನೀಡುವಂತೆ ಕೇಳಿದ್ದಕ್ಕೆ ನಿನ್ನ ವಿರುದ್ಧ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಹಾಗೂ ಬಾಡಿಗೆ ಗೂಂಡಾಗಳನ್ನು ಬಿಟ್ಟು ಕೊಲೆ ಮಾಡಿಸುವುದಾಗಿ ಜೀವ ಬೆದರಿಕೆ ಹಾಕಿದ್ದಳು ಎಂದು ಸುದೀನ ಎಂಬುವವರು ಕೋಟ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ. ಒಟ್ಟಾರೆ ಚೈತ್ರಾ ಕುಂದಾಪುರ ಹಲವು ಜನರಿಗೆ ವಂಚಿಸಿರುವ ವಿಚಾರ ಒನ್ನೊಂದಾಗಿ ಹೊರ ಬರುತ್ತಿದೆ.