ಬೆಂಗಳೂರು: ಹಸುಗೂಸು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳ ತೀವ್ರ ವಿಚಾರಣೆ ನಡೆಸಲಾಗಿದ್ದು, ಈ ವೇಳೆ ಆಘಾತಕಾರಿ ಮಾಹಿತಿಗಳು ಬಹಿರಂಗವಾಗಿವೆ. ಆರೋಪಿಗಳು ಕಳೆದ 6 ವರ್ಷಗಳಿಂದ ಮಕ್ಕಳ ಮಾರಾಟವನ್ನೇ ದಂಧೆಯನ್ನಾಗಿ ಮಾಡಿಕೊಂಡಿದ್ದರು. ಅದರಲ್ಲಿಯೂ ಆರೋಪಿ ಮಹಾಲಕ್ಷ್ಮೀ ಎಂಬ ಮಹಿಳೆ ಇದೇ ದಂಧೆಯಿಂದ ಸ್ವಂತ ಮನೆಯನ್ನು ಕಟ್ಟಿಸಿ, ಐಷಾರಾಮಿ ಜೀವನ ನಡೆಸುತ್ತಿದ್ದಳು ಎಂಬ ಅಂಶ ಬಯಲಾಗಿದೆ.
ಹಸುಗೂಸು ಮಾರಾಟ ಪ್ರಕರಣದಲ್ಲಿ ಇದುವರೆಗೂ ಸಿಸಿಬಿ ಪೊಲೀಸರು 8 ಆರೊಪಿಗಳನ್ನು ಬಂಧಿಸಿದ್ದಾರೆ. ಅವರಲ್ಲಿ ಮಹಾಲಕ್ಷ್ಮೀ ಎಂಬ ಮಹಿಳೆ ಆರಂಭದಲ್ಲಿ ಗಾರ್ಮೆಂಟ್ ನಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಆಕೆಗೆ ಪರಿಚಯವಾದ ಮಹಿಳೆ ಅಂಡಾಣು ನೀಡಿದರೆ ಹಣ ಕೊಡುವುದಾಗಿ ಹೇಳಿದ್ದಳು. ಅಂಡಾಣುಕೊಟ್ಟಿದ್ದ ಮಹಾಲಕ್ಷ್ಮಿಗೆ ಮಹಿಳೆ ಹಣ ನೀಡಿದ್ದಳು. ಹೀಗೆ ಮಹಾಲಕ್ಷ್ಮೀ ತಾನು ಹಾಗೂ ಬೇರೆಯವರನ್ನೂ ಈ ದಂಧೆಯಲ್ಲಿ ತೊಡಗಿಸಿ ಕಮಿಷನ್ ಕೂಡ ಪಡೆಯಲಾರಂಭಿಸಿದ್ದಳು. ಈಕೆ ಮಕ್ಕಳ ಮಾರಾಟ ಮಾಡುವ ದಂಧೆ ಆರಂಭಿಸಿ ಕೋಟ್ಯಧಿಪತಿಯಾಗಿ ಸ್ವಂತ ಮನೆ, ಕಾರು, ಭಾರಿ ಒಡವೆ ಐಷಾರಾಮಿ ಜೀವನ ನಡೆಸುತ್ತಿದ್ದಳು ಎಂದು ವಿಚರಣೆ ವೇಳೆ ತಿಳಿದುಬಂದಿದೆ.
ಆರೋಪಿಗಳು ಈವರೆಗೆ ಸುಮಾರು 250ಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿದ್ದು, ಈ ಪೈಕಿ 50-60 ಮಕ್ಕಳನ್ನು ಕರ್ನಾಟಕದಲ್ಲಿ ಮಾರಾಟ ಮಾಡಲಾಗಿದೆ. ಉಳಿದ ಮಕ್ಕಳನ್ನು ತಮಿಳುನಾಡಿನಲ್ಲಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.
ಕರ್ನಾಟಕದಲ್ಲಿ ಮಾರಾಟವಾಗಿರುವ ಮಕ್ಕಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ಸದ್ಯ 10 ಮಕ್ಕಳ ಸುಳಿವು ಸಿಕ್ಕಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.