ಉತ್ತರ ಪ್ರದೇಶದ ಪೂರ್ವಂಚಲ್ ಎಕ್ಸ್ ಪ್ರೆಸ್ ವೇನಲ್ಲಿ ಇತ್ತೀಚೆಗೆ ನಡೆದ ಭೀಕರ ಅಪಘಾತದಲ್ಲಿ ಐಷಾರಾಮಿ ಬಿಎಂಡಬ್ಲ್ಯೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಇವರುಗಳ ಪೈಕಿ ಒಬ್ಬರು ವೈದ್ಯರಾಗಿದ್ದರೆ, ಮತ್ತೊಬ್ಬರು ಇಂಜಿನಿಯರ್ ಹಾಗೂ ಇನ್ನಿಬ್ಬರು ಉದ್ಯಮಿಗಳು. ಸಾವನ್ನಪ್ಪಿದ ನಾಲ್ವರು ಸಹ 35 ವರ್ಷದ ಆಸುಪಾಸಿನವರು ಎನ್ನಲಾಗಿದೆ.
ಇವರುಗಳು ಮಿತಿಮೀರಿದ ವೇಗದಲ್ಲಿ ಕಾರನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಫೇಸ್ಬುಕ್ ಮೂಲಕ ಲೈವ್ ಟೆಲಿಕಾಸ್ಟ್ ಮಾಡಿದ್ದು, ಕಾರು 230 ಕಿ.ಮೀ. ವೇಗದಲ್ಲಿ ಹೋಗುತ್ತಿರುವುದು ಇದರಲ್ಲಿ ಗೊತ್ತಾಗುತ್ತದೆ. ಅಲ್ಲದೆ ಓರ್ವ ಇನ್ನಷ್ಟು ವೇಗವಾಗಿ ಹೋಗು ಎಂದು ಹೇಳಿದರೆ, ಮತ್ತೊಬ್ಬ ನಾವು ನಾಲ್ವರು ಸಾಯುತ್ತೇವೆ ಎಂದು ತಮಾಷೆ ಮಾಡಿದ್ದರು. ಆದರೆ ಕೆಲ ಕ್ಷಣಗಳಲ್ಲಿ ಇದು ನಿಜವಾಗುತ್ತದೆ ಎಂಬ ಕಿಂಚಿತ್ತು ಅನುಮಾನವೂ ಅವರಿಗಿರಲಿಲ್ಲ.
ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೋಡುಗರನ್ನು ಬೆಚ್ಚಿ ಬೀಳಿಸುತ್ತದೆ. ಮೇಲ್ನೋಟಕ್ಕೆ ಮಿತಿಮೀರಿದ ವೇಗವೇ ಅಪಘಾತಕ್ಕೆ ಕಾರಣ ಎಂದು ಹೇಳಬಹುದಾಗಿದ್ದು, ಬಿಎಂಡಬ್ಲ್ಯೂ ಕಾರಿನ ಗರಿಷ್ಠ ವೇಗವನ್ನು ಇವರು ರೆಕಾರ್ಡ್ ಮಾಡಲು ಬಯಸಿದ್ದರು ಎನ್ನಲಾಗಿದೆ. ಆದರೆ ವಿಧಿಯಾಟವೇ ಬೇರಾಗಿತ್ತು. ಇವರುಗಳು ಹೋಗುತ್ತಿದ್ದ ಕಾರು ಟ್ರಕ್ ಒಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಹ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.