ಬೆಂಗಳೂರು: ನೀಟ್ ಮಾದರಿಯಲ್ಲಿ ಕಟ್ಟುನಿಟ್ಟಾಗಿ ಸಿಇಟಿ ನಡೆಸಲಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಪರೀಕ್ಷಾ ಕೇಂದ್ರದಲ್ಲಿ ಮಾಂಗಲ್ಯಸರ, ಮೂಗುತಿ, ಓಲೆ, ಬಳೆ ನಿಷೇಧಿಸಲಾಗಿದೆ. ಯಾವುದೇ ರೀತಿಯ ಆಭರಣ ಧರಿಸಿ ಪರೀಕ್ಷೆ ಬರೆಯುವಂತಿಲ್ಲ. ಪರೀಕ್ಷಾ ಕೇಂದ್ರಕ್ಕೆ ವಾಚ್, ಕ್ಯಾಲ್ಕುಲೇಟರ್ ಕೂಡ ತೆಗೆದುಕೊಂಡು ಹೋಗುವಂತಿಲ್ಲ. ಇದೇ ಮೊದಲ ಬಾರಿಗೆ ಜಾಮರ್ ಅಳವಡಿಸಿ ಸಿಇಟಿ ನಡೆಸಲು ಸಿದ್ಧತೆ ನಡೆಸಲಾಗಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೆಟಲ್ ಡಿಟೆಕ್ಟರ್ ಅಳವಡಿಕೆಗೆ ಮುಂದಾಗಿದೆ.
ಈ ಬಾರಿ ಸಿಇಟಿ ಪರೀಕ್ಷೆಗೆ 1.7 ಲಕ್ಷ ವಿದ್ಯಾರ್ಥಿನಿಯರು, 1.4 ಲಕ್ಷ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 2.11 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಸಿಇಟಿಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಹದ್ದಿನಕಣ್ಣು ಇಡಲಾಗಿದ್ದು, ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು. ಪರೀಕ್ಷಾ ದಿನದಂದು ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ತೆರೆಯುವಂತಿಲ್ಲ.
ಸಿಇಟಿ ಪರೀಕ್ಷೆಗೆ ಆಗಮಿಸುವವರಿಗೆ ಹಿಜಾಬ್ ಧರಿಸಿ ಬರಲು ಅವಕಾಶ ಇರುವುದಿಲ್ಲ. ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಮಾದರಿಯಲ್ಲಿ ಸಿಇಟಿ ನಡೆಯಲಿದೆ. ಯಾವುದೇ ಧಾರ್ಮಿಕ ಸೂಚಕ ಬಟ್ಟೆಗಳನ್ನು ಧರಿಸಿ ಬರುವಂತಿಲ್ಲ. ಜೂನ್ 16, 17, 18 ರಂದು ಸಿಇಟಿ ನಡೆಯಲಿದ್ದು, ಸರ್ಕಾರದ ವಸ್ತ್ರ ನಿಯಮ ಪಾಲಿಸಲಾಗುವುದು ಎಂದು ಹೇಳಲಾಗಿದೆ.