ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿಗೆ ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆ ಸಂಖ್ಯೆಯ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಈ ಬಾರಿ ಸಿಇಟಿಗೆ 2.55 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.
ಇಂಜಿನಿಯರಿಂಗ್ ಸೇರಿದಂತೆ ಬಿಎಸ್ಸಿ ನರ್ಸಿಂಗ್ ಎರಡು ವೃತ್ತಿಪರ ಕೋರ್ಸ್ ಗಳಿಗೆ ಏಕಕಾಲದಲ್ಲಿ ಸಿಇಟಿ ನಡೆಯಲಿದೆ. ಇಂಜಿನಿಯರಿಂಗ್, ಬಿಎಸ್ಸಿ ನರ್ಸಿಂಗ್ 1.15 ಲಕ್ಷ ಸೀಟುಗಳಿಗೆ ಇದುವರೆಗೆ 2.55 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ.
ಫಾರ್ಮಸಿ, ಇಂಜಿನಿಯರಿಂಗ್, ವೆಟರ್ನರಿ, ಅಗ್ರಿಕಲ್ಚರ್ ಕೋರ್ಸ್ ಗಳ 90,000 ಸೀಟುಗಳು ಹಾಗೂ ಈ ಬಾರಿ ಸಿಇಟಿಗೆ ಸೇರ್ಪಡೆಯಾದ ಬಿಎಸ್ಸಿ ನರ್ಸಿಂಗ್ 25,000 ಸೀಟುಗಳಿಗೆ ವಿದ್ಯಾರ್ಥಿಗಳು ಸಿಇಟಿ ಬರೆಯಲಿದ್ದಾರೆ.
ಕೆಇಎ ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟೊಂದು ಸಂಖ್ಯೆಯ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ 40,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಇವರಲ್ಲಿ 1,18,336 ವಿದ್ಯಾರ್ಥಿಗಳು, 1,36,104 ವಿದ್ಯಾರ್ಥಿನಿಯರು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.
ಸಿಇಟಿ ಕನ್ನಡ ಭಾಷೆ ಪರೀಕ್ಷೆಗೆ ಈ ಹಿಂದೆ ಬೆಂಗಳೂರು ಸೇರಿದಂತೆ ಕೆಲವೇ ಕೇಂದ್ರಗಳಿದ್ದು, ಈ ಬಾರಿ 7 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನಲ್ಲಿ 110 ಕೇಂದ್ರಗಳು ಸೇರಿದಂತೆ 580 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಮೇ 20, 21ರಂದು ಸಿಇಟಿ ನಡೆಯಲಿದ್ದು, ಮೇ 22 ರಂದು ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. 7 ಪರೀಕ್ಷಾ ಕೇಂದ್ರಗಳನ್ನು ಕನ್ನಡ ಭಾಷಾ ಪರೀಕ್ಷೆಗೆ ಗುರುತಿಸಲಾಗಿದ್ದು, 1984 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.