ಬೆಂಗಳೂರು: ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಸೀಟುಗಳ ಎರಡನೇ ಹಂಚಿಕೆ ವೇಳಾಪಟ್ಟಿ ಪ್ರಕಟಿಸಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೇಳಾಪಟ್ಟಿ ಪ್ರಕಟಿಸಿದ್ದು, ನವೆಂಬರ್ 26ರಂದು ಸೀಟು ಹಂಚಿಕೆ ಮತ್ತು ಶುಲ್ಕದ ಮಾಹಿತಿ ನೀಡಲಾಗುವುದು. ನವೆಂಬರ್ 28 ರೊಳಗೆ ಅಭ್ಯರ್ಥಿಗಳು ಸೀಟು ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ನವೆಂಬರ್ 29ರಂದು ಸೀಟು ಹಂಚಿಕೆಯ ಮಾಹಿತಿ ಪ್ರಕಟಿಸಲಾಗುತ್ತದೆ. ನವೆಂಬರ್ 30 ರೊಳಗೆ ಶುಲ್ಕ ಪಾವತಿಸಿ ಆಯ್ಕೆ ಮಾಡಿಕೊಂಡ ಕಾಲೇಜುಗಳಿಗೆ ಪ್ರವೇಶ ಪಡೆದುಕೊಳ್ಳಬೇಕು ಎಂದು ಹೇಳಲಾಗಿದೆ.
ರ್ಯಾಂಕಿಂಗ್ ಪಡೆದು ಇದುವರೆಗೂ ದಾಖಲಾತಿ ಪರಿಶೀಲನೆಗೆ ಹಾಜರಾಗದ ಅಭ್ಯರ್ಥಿಗಳು ಎರಡನೇ ಸುತ್ತಿನ ಸೀಟು ಹಂಚಿಕೆಗೆ ಅರ್ಹತೆ ಪಡೆಯಲು ನವೆಂಬರ್ 26ರಂದು ಬೆಳಿಗ್ಗೆ 11 ಗಂಟೆಗೆ ಮಲ್ಲೇಶ್ವರದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಗೆ ಮೂಲ ದಾಖಲೆ ಹಾಗೂ ನಕಲು ಪ್ರತಿಗಳೊಂದಿಗೆ ಹಾಜರಾಗಬಹುದಾಗಿದೆ.
ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಸರ್ಕಾರದ ನಿರ್ದೇಶನದ ಅನ್ವಯ ರ್ಯಾಂಕಿಂಗ್ ನೀಡಲಾಗುವುದು. ಎರಡನೇ ಸುತ್ತಿನ ಸೀಟು ಹಂಚಿಕೆ ಬಳಿಕ ಉಳಿಯುವ ಸೀಟುಗಳನ್ನು ಹಂಚಿಕೆ ಮಾಡಲಾಗುವುದು ಎಂದು ಹೇಳಲಾಗಿದೆ.