ಬೆಂಗಳೂರು: ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ದ್ವಿತೀಯ ಪಿಯುಸಿ ಅಂಕಗಳನ್ನು ಪರಿಗಣಿಸದೆ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಆಗಸ್ಟ್ 28, 29 ರಂದು ಸಿಇಟಿ ಪರೀಕ್ಷೆ ನಡೆಯಲಿದೆ. ಆಗಸ್ಟ್ 28 ರಂದು ಜೀವಶಾಸ್ತ್ರ, ಗಣಿತ, ಆಗಸ್ಟ್ 29 ರಂದು ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಆಗಸ್ಟ್ 30 ರಂದು ಗಡಿನಾಡು, ಹೊರನಾಡು ಕನ್ನಡಿಗರಿಗೆ ಕನ್ನಡ ಪರೀಕ್ಷೆ ನಡೆಯಲಿದೆ.
ಈ ವರ್ಷ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ನಿಯಮ ಸಡಿಲಿಕೆ ಮಾಡಲಾಗಿದ್ದು, ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಪಿಯುಸಿ ಅಂಕಗಳನ್ನು ಪರಿಗಣಿಸುವುದಿಲ್ಲ. ವೃತ್ತಿ ಶಿಕ್ಷಣ ಕೋರ್ಸ್ ಪ್ರವೇಶಕ್ಕೆ ಸಿಇಟಿ ಅಂಕಗಳೇ ಮಾನದಂಡವಾಗಿರುತ್ತದೆ. ಸಿಇಟಿ ಆಧರಿಸಿ ವಿಜ್ಞಾನ ಪದವಿಗೆ ಪ್ರವೇಶ ನೀಡಲು ಚಿಂತನೆ ನಡೆದಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.