ಬೆಂಗಳೂರು: ಸಿಇಟಿ ಮತ್ತು ನೀಟ್ ಅಭ್ಯರ್ಥಿಗಳ ಸೀಟು ಹಂಚಿಕೆ ಕೌನ್ಸೆಲಿಂಗ್ ಈ ಬಾರಿ ಸಂಯೋಜಿತವಾಗಿ ನಡೆಯಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರತ್ಯೇಕವಾಗಿ ನಡೆಸುತ್ತಿದ್ದ ಸಿಇಟಿ ಮತ್ತು ನೀಟ್ ಅಭ್ಯರ್ಥಿಗಳ ಸೀಟು ಹಂಚಿಕೆ ಕೌನ್ಸೆಲಿಂಗ್ ಈ ಬಾರಿ ಸಂಯೋಜಿತವಾಗಿ ನಡೆಸಲಾಗುವುದು.
ಕಳೆದ ವರ್ಷ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್ ಗಳ ಸೀಟು ಹಂಚಿಕೆ ಪ್ರತ್ಯೇಕವಾಗಿ ನಡೆದಿದ್ದು ಇದರಿಂದ ತಮಗೆ ಬೇಕಾದ ಕೋರ್ಸ್, ಕಾಲೇಜು ಸಿಗದಂತಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿತ್ತು. ಎರಡು ಕಡೆ ಸೀಟು ಇಟ್ಟುಕೊಂಡು ನಂತರ ರದ್ದು ಮಾಡಿಸುವಾಗ ತೊಂದರೆಯಾಗುತ್ತಿತ್ತು. ಹೀಗಾಗಿ ಜೊತೆಯಾಗಿಯೇ ನೀಟ್, ಸಿಇಟಿಗೆ ಒಂದೇ ಬಾರಿ ಕೌನ್ಸೆಲಿಂಗ್ ನಡೆಸಲಾಗುವುದು ಎಂದು ಹೇಳಲಾಗಿದೆ.
ಸಿಇಟಿ ಮತ್ತು ನೀಟ್ ಬರೆದ ಅಭ್ಯರ್ಥಿಗಳು ಇಂಜಿನಿಯರಿಂಗ್, ಮೆಡಿಕಲ್, ವೆಟರ್ನರಿ, ಕೃಷಿ, ನರ್ಸಿಂಗ್, ಫಾರ್ಮಸಿ ಕೋರ್ಸ್ ಗಳ ಪ್ರವೇಶ ಬಯಸಿದ್ದಲ್ಲಿ ಸೀಟ್ ಮ್ಯಾಟ್ರಿಕ್ಸ್ ನಲ್ಲಿರುವ ಕೋರ್ಸ್ ಗಳನ್ನು ಶುಲ್ಕ ಮತ್ತು ಲಭ್ಯ ಇರುವ ಸೀಟುಗಳನ್ನು ಪರಿಶೀಲಿಸಿ ಆದ್ಯತೆಗೆ ಅನುಸಾರವಾಗಿ ಸೀಟ್ ಗಳ ಎಂಟ್ರಿ ಮಾಡಬೇಕಿದೆ.
ಅಭ್ಯರ್ಥಿಗಳು ಮೊದಲು ಮೆಡಿಕಲ್ ಕೋರ್ಸ್ ಗೆ ಹೋಗಲು ಬಯಸಿದಲ್ಲಿ ಅಲ್ಲಿ ಸೀಟು ಸಿಗದೆ ವಾಪಸ್ ಇಂಜಿನಿಯರಿಂಗ್ ಆಯ್ಕೆ ಮಾಡುವುದಾದರೆ ಮೊದಲು ಮೆಡಿಕಲ್ ಕೋರ್ಸ್ ಆಪ್ಷನ್ ಎಂಟ್ರಿ ಕೊಡಬೇಕು. ಎರಡನೇ ಸಾಲಿನಲ್ಲಿ ಇಂಜಿನಿಯರಿಂಗ್ ಆಪ್ಷನ್ ಕೊಡಬೇಕು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಭ್ಯರ್ಥಿಗಳ ಮೆರಿಟ್ ಮೀಸಲು ಅಭ್ಯರ್ಥಿ ಆಪ್ಷನ್ ಪರಿಗಣಿಸಿ ಸೀಟು ನೀಡಲಾಗುವುದು. ಎರಡರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಲು ಅವಕಾಶ ನೀಡಲಾಗುವುದು. ನಂತರ ಅಭ್ಯರ್ಥಿ ಚಲನ್ ಮೂಲಕ ಶುಲ್ಕ ಪಾವತಿಸಿ ಅಡ್ಮಿಷನ್ ಆರ್ಡರ್ ಅನ್ನು ಆನ್ಲೈನ್ ಮೂಲಕ ಪಡೆದು ಕಾಲೇಜಿಗೆ ಸೇರಬೇಕಿದೆ. ಇದನ್ನು ಕಾಲೇಜಿನ ಪೋರ್ಟಲ್ ನಲ್ಲಿ ಅಪ್ ಡೇಟ್ ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಸೀಟು ಖಾಲಿ ಇರುವುದಾಗಿ ಪರಿಗಣಿಸಿ ಮತ್ತೊಬ್ಬ ಅಭ್ಯರ್ಥಿಗೆ ನೀಡುವ ಸಾಧ್ಯತೆ ಇದೆ.
ಈ ಕ್ರಮದಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಕೋರ್ಸ್ ಗಳನ್ನು ಪಡೆಯಬಹುದಾಗಿದ್ದು, ಪ್ರವೇಶಾತಿ ಪ್ರಕ್ರಿಯೆ ಸುಲಭವಾಗುತ್ತದೆ ಎನ್ನಲಾಗಿದೆ.