ಬೆಂಗಳೂರು: ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ನೀಟ್, ಸಿಇಟಿ ಸೇರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಾಗುವುದು.
ಪ್ರಸಕ್ತ ವರ್ಷದಲ್ಲಿ 25,000 ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಉಚಿತ ತರಬೇತಿ ನೀಡುವುದಾಗಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆಯಲು ಲಕ್ಷಾಂತರ ಶುಲ್ಕ ಪಾವತಿಸುವುದನ್ನು ತಡೆಯಲು 25,000 ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದಲೇ ತರಬೇತಿ ನೀಡಲು ನಿರ್ಧರಿಸಲಾಗಿದೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಾಗೂ ಇಲಾಖೆಯಿಂದ ನಡೆಸುವ ಪ್ರತ್ಯೇಕ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ 25 ಸಾವಿರ ವಿದ್ಯಾರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಲಿದ್ದು, ಆನ್ಲೈನ್ ಕ್ಲಾಸ್ ಮೂಲಕ ತರಬೇತಿ ನಡೆಸಲಾಗುವುದು. ಅವರೊಂದಿಗೆ ಇತರೆ ವಿದ್ಯಾರ್ಥಿಗಳು ಕೂಡ ಲಾಭ ಪಡೆಯಬಹುದಾಗಿದೆ. ಈ ಯೋಜನೆಗೆ ಇಲಾಖೆ 12.50 ಕೋಟಿ ರೂ. ವ್ಯಯಿಸಲಾಗುವುದು ಎಂದು ತಿಳಿಸಿದ್ದಾರೆ.