
ಬೆಂಗಳೂರು: ಮೆಡಿಕಲ್ ಮತ್ತು ಡೆಂಟಲ್ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆಯಲಿರುವ ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಎಲ್ಲಾ ಪಾಠಗಳನ್ನು ಓದಬೇಕಿದೆ. ಪ್ರಥಮ ಮತ್ತು ದ್ವಿತೀಯ ಪಿಯುಸಿ NCERT ಪಠ್ಯದ ಎಲ್ಲಾ ಪಾಠಗಳನ್ನು ಓದಬೇಕಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಎಲ್ಲ ಅಧ್ಯಾಯಗಳನ್ನು ಕೂಡ ಪರೀಕ್ಷೆಗೆ ಪರಿಗಣಿಸಿದೆ. ಇದರಿಂದಾಗಿ, ವಿದ್ಯಾರ್ಥಿಗಳು ಪ್ರಥಮ ಮತ್ತು ದ್ವಿತೀಯ ಪಿಯುಸಿ NCERT ಪಠ್ಯದ ಎಲ್ಲಾ ಪಾಠ ಓದುವ ಅನಿವಾರ್ಯತೆ ಎದುರಾಗಿದೆ. ಸಿಇಟಿಗೆ ಈಗಾಗಲೇ ನಿಗದಿಯಾಗಿರುವಂತೆ ಶೇಕಡ 70 ರಷ್ಟು ಪಾಠಗಳನ್ನು ಓದಿದ್ದರೆ ಸಾಕಾಗುತ್ತದೆ.
ಕೊರೊನಾ ಹಿನ್ನೆಲೆಯಲ್ಲಿ ನೀಟ್ ಪರೀಕ್ಷೆ ವಿಳಂಬವಾಗಿದೆ. ಆಗಸ್ಟ್ ಇಲ್ಲವೆ ಸೆಪ್ಟೆಂಬರ್ನಲ್ಲಿ ಪರೀಕ್ಷೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸಿಬಿಎಸ್ಇ 12 ನೇ ತರಗತಿ ಪಠ್ಯಗಳನ್ನು ಶೇಕಡ 30 ರಷ್ಟು ಕಡಿತಗೊಳಿಸಿದ್ದು ಶೇಕಡ 70 ರಷ್ಟು ಪಠ್ಯದಲ್ಲಿ ಪ್ರಶ್ನೆ ಕೇಳುವುದಾಗಿ ಹೇಳಿದ್ದು ರಾಜ್ಯ ಸರ್ಕಾರ ಕೂಡ ಸಿಇಟಿ ಪ್ರವೇಶ ಪರೀಕ್ಷೆಗೆ ದ್ವಿತೀಯ ಪಿಯುಸಿಯ ಶೇಕಡ 70 ರಷ್ಟು ಪಠ್ಯಗಳನ್ನು ನಿಗದಿಪಡಿಸಿದೆ.
ಆದರೆ, ನೀಟ್ ಪರೀಕ್ಷೆಗೆ ಇದುವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಪಠ್ಯ ಕಡಿತ ಮಾಡದ ಕಾರಣ ಗೊಂದಲ ಉಂಟಾಗಿದೆ. ನೀಟ್ ಪರೀಕ್ಷೆಗೆ ಪಠ್ಯಗಳನ್ನು ಕಡಿತ ಮಾಡದೆ ಪೂರ್ಣಪ್ರಮಾಣದಲ್ಲಿ ಪ್ರಶ್ನೆಗಳನ್ನು ಕೇಳಲಾಗುವುದು ಎಂದು ಹೇಳಲಾಗಿದೆ.