
ಬೆಂಗಳೂರು: ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಇಂಜಿನಿಯರಿಂಗ್ ಹೊರತುಪಡಿಸಿ ಬೇರೆ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಬಯಸಿದ ಅರ್ಹ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಕಾರ್ಯ ಜುಲೈ 24 ರಿಂದ ಆಗಸ್ಟ್ 1ರವರೆಗೆ ನಡೆಯಲಿದೆ.
ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ, ಯೋಗ, ನ್ಯಾಚುರೋಪತಿ ಕೋರ್ಸ್ ಗಳಿಗೆ ಪ್ರವೇಶ ಬಯಸಿದ ಅಭ್ಯರ್ಥಿಗಳಿಗೆ ಪ್ರಾಧಿಕಾರದ ಈ ಪ್ರಕ್ರಿಯೆ ಅನ್ವಯವಾಗುತ್ತದೆ. ನಿಗದಿತ ದಿನಗಳಂದು ಯಾವ ರ್ಯಾಂಕಿಂಗ್ ವರೆಗಿನ ಅಭ್ಯರ್ಥಿಗಳು ದಾಖಲಾತಿ ಪರಿಶೀಲನೆಗೆ ಬರಬೇಕೆಂಬುದರ ಬಗ್ಗೆ http://kea.kar.nic.in ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದ್ದು, ಇದನ್ನು ಗಮನಿಸಿ ಅಭ್ಯರ್ಥಿಗಳು ಮೂಲ ದಾಖಲಾತಿಗಳೊಂದಿಗೆ ದಾಖಲಾತಿ ಪರಿಶೀಲನೆಗೆ ಹಾಜರಾಗುವಂತೆ ತಿಳಿಸಲಾಗಿದೆ.
ಈ ಕೋರ್ಸ್ ಗಳಿಗೆ ಧಾರ್ಮಿಕ, ಭಾಷಾ ಅಲ್ಪಸಂಖ್ಯಾತರು, ಅನಿವಾಸಿ ಭಾರತೀಯ ಕೋಟಾದಡಿ ಪ್ರವೇಶ ಬಯಸಿದ್ದವರ ದಾಖಲಾತಿಗಳ ಪರಿಶೀಲನೆಯನ್ನು ಆಗಸ್ಟ್ 2 ರಂದು ನಡೆಸಲಾಗುತ್ತದೆ.
ವೃತ್ತಿಪರ ಕೋರ್ಸ್ ಗಳಿಗೆ ಜಾತಿ, ಆದಾಯ, ಕಲ್ಯಾಣ ಕರ್ನಾಟಕ ಪ್ರಮಾಣ ಪತ್ರಗಳನ್ನು ಆನ್ಲೈನ್ ನಲ್ಲಿ ಸಲ್ಲಿಸಿ ವ್ಯಾಸಂಗ ಪ್ರಮಾಣ ಪತ್ರ ಪರಿಶೀಲನೆಯನ್ನು ಕ್ಷೆತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಮುಗಿಸಿ ಸ್ವೀಕೃತಿ ಪತ್ರ ಪಡೆದಿದ್ದರೂ ಕೂಡ ನಾನಾ ಕಾರಣಗಳಿಂದ ಮೀಸಲಾತಿ ಆರ್.ಡಿ. ಸಂಖ್ಯೆ ತಿರಸ್ಕೃತವಾಗಿರುವ ಅಭ್ಯರ್ಥಿಗಳು ಸಮರ್ಪಕ ಪ್ರಮಾಣಪತ್ರ ಮತ್ತು ದಾಖಲೆಗಳೊಂದಿಗೆ ಪರಿಶೀಲನೆಗೆ ಜುಲೈ 22 ಮತ್ತು 23 ರಂದು ಪ್ರಾಧಿಕಾರದ ಕಚೇರಿಗೆ ಹಾಜರಾಗಬೇಕು.
ಇಂತಹ ಅಭ್ಯರ್ಥಿಗಳ ಹೆಸರುಗಳನ್ನು ಪ್ರಾಧಿಕಾರದ ವೆಬ್ಸೈಟ್ ನಲ್ಲಿ ಈಗಾಗಲೇ ಪ್ರಕಟಿಸಿದ್ದು, ಯಾವ ರ್ಯಾಂಕ್ ಪಡೆದವರು ಯಾವ ದಿನ ಹಾಜರಾಗಬೇಕೆಂದು ತಿಳಿಸಲಾಗಿದೆ. ಅಭ್ಯರ್ಥಿಗಳು ಎಲ್ಲಾ ಪ್ರಮಾಣ ಪತ್ರಗಳನ್ನು ತಮ್ಮ ಹೆಸರಿನಲ್ಲಿ ಸರ್ಕಾರದ ನಿಗದಿತ ನಮೂನೆಗಳಲ್ಲಿಯೇ ಪಡೆದುಕೊಂಡಿರಬೇಕು. ಅವೆಲ್ಲವೂ ಚಾಲ್ತಿಯಲ್ಲಿರಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದ್ದಾರೆ.