
ಬೆಂಗಳೂರು: ಇಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ನಡೆಸಲಾಗುವ ಸಿಇಟಿ ಪ್ರಕ್ರಿಯೆಯಲ್ಲಿ ಕೆಲವು ಮಹತ್ವದ ಬದಲಾವಣೆ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮುಂದಾಗಿದೆ. ಈ ಮೂಲಕ ಸಿಇಟಿ ಪ್ರಕ್ರಿಯೆಗೆ ಹೊಸ ರೂಪ ನೀಡಲಾಗುವುದು ಎಂದು ಹೇಳಲಾಗಿದೆ.
ಸಿಇಟಿ ಹಾಗೂ ನೀಟ್ ಪರೀಕ್ಷೆಗೆ ಒಂದೇ ಅರ್ಜಿ ಪರಿಗಣನೆ, ವಿದ್ಯಾರ್ಥಿಗಳ ದಾಖಲಾತಿ ಪರಿಶೀಲನೆ ನಡೆಸುವ ಜೊತೆಗೆ ನೋಂದಾಯಿತ ವಿದ್ಯಾರ್ಥಿಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡಲಾಗುವುದು. ಆನ್ಲೈನ್ ಪರೀಕ್ಷೆ ಚಿಂತನೆ ಕೈಬಿಡಲಾಗಿದ್ದು ಅರ್ಜಿ ಸಲ್ಲಿಕೆ ವೇಳೆಯೇ ದಾಖಲಾತಿ ಪರಿಶೀಲನೆ ನಡೆಸಲಾಗುವುದು.
ಜನವರಿ ಅಂತ್ಯಕ್ಕೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯಲಿದ್ದು, ನೀಟ್ ನೊಂದಣಿಗೂ ಇದೆ ಮಾಹಿತಿ ಪರಿಗಣಿಸಲಾಗುತ್ತದೆ. ಪ್ರತಿ ಬಾರಿ ವಿದ್ಯಾರ್ಥಿಗಳು ಪರೀಕ್ಷೆ ಬರೆದು ಅರ್ಹತೆ ಪಡೆದ ನಂತರ ಮೀಸಲಾತಿ ಪ್ರಮಾಣ ಪತ್ರಗಳನ್ನು ಪರಿಶೀಲಿಸಲಾಗುತ್ತಿತ್ತು. ಈಗ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿಯೇ ದಾಖಲಾತಿ ಪರಿಶೀಲನೆ ನಡೆಸಲಾಗುತ್ತದೆ. ಸೂಕ್ತ ದಾಖಲಾತಿ ಸಲ್ಲಿಕೆ ಮಾಡದಿದ್ದರೆ ಅರ್ಜಿ ಸಲ್ಲಿಕೆ ಪೂರ್ಣವಾಗುವುದಿಲ್ಲ. ಆನ್ಲೈನ್ ಪರೀಕ್ಷೆ ನಡೆಸಿರಲು ತೀರ್ಮಾನಿಸಲಾಗಿದೆ. ಅನಗತ್ಯ ಗೊಂದಲಗಳಿಗೆ ಕಡಿವಾಣ ಹಾಕಿ ವಿದ್ಯಾರ್ಥಿ ಸ್ನೇಹಿ ಸಿಇಟಿ ನಡೆಸಲು ಪ್ರಾಧಿಕಾರ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.