ಬೆಂಗಳೂರು: ಸಿಇಟಿ ಮುಂದುವರೆದ ಸೀಟು ಹಂಚಿಕೆ ಪ್ರಕ್ರಿಯೆ ಇಂದಿನಿಂದ ಆರಂಭವಾಗಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ಬಗ್ಗೆ ಮಾಹಿತಿ ನೀಡಿದ್ದು, 2021 ನೇ ಸಾಲಿನ ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿವಿಜ್ಞಾನ, ಫಾರ್ಮಸಿ, ಪಶುಸಂಗೋಪನೆ, ಬಿ ಫಾರ್ಮಾ, ನ್ಯಾಚುರೋಪಥಿ ಮತ್ತು ಯೋಗ, ಬಿಎಸ್ಸಿ ಆನರ್ಸ್ ಸೇರಿದಂತೆ ವಿವಿಧ ವಿಷಯಗಳ ಕೋರ್ಸ್ ಗಳ ಪ್ರವೇಶಕ್ಕೆ ಲಭ್ಯವಿರುವ ಸೀಟುಗಳಿಗೆ ಎರಡನೇ ಸುತ್ತಿನ ಮುಂದುವರೆದ ಸೀಟು ಹಂಚಿಕೆ ಪ್ರಕ್ರಿಯೆ ಇಂದಿನಿಂದ ಆರಂಭವಾಗಲಿದೆ ಎಂದು ತಿಳಿಸಲಾಗಿದೆ.
ಪ್ರಾಧಿಕಾರ ಸೀಟ್ ಮ್ಯಾಟ್ರಿಕ್ಸ್ ಪ್ರಕಟಿಸಲಿದ್ದು, ಅಭ್ಯರ್ಥಿಗಳು ಸೀಟು ಆಯ್ಕೆಗಳನ್ನು ಬದಲಾಯಿಸಲು ಡಿಸೆಂಬರ್ 26ರ ವರೆಗೆ ಅವಕಾಶ ನೀಡಲಾಗಿದೆ. ಡಿಸೆಂಬರ್ 27 ರಂದು ಸೀಟು ಹಂಚಿಕೆಯ ಫಲಿತಾಂಶ ಪ್ರಕಟವಾಗಲಿದ್ದು, ಡಿಸೆಂಬರ್ 28 ರಿಂದ 29 ರವರೆಗೆ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಬಹುದು. ಡಿಸೆಂಬರ್ 30 ಕಾಲೇಜುಗಳಿಗೆ ಪ್ರವೇಶ ಪಡೆಯಲು ಕೊನೆಯ ದಿನವಾಗಿರುತ್ತದೆ.
ಎರಡನೆಯ ಮುಂದುವರೆದ ಸುತ್ತಿನಲ್ಲಿ ಸೀಟು ಹಂಚಿಕೆ ಬಳಿಕ ಅಭ್ಯರ್ಥಿಗಳಿಗೆ ಯಾವುದೇ ಚಾಯ್ಸ್ ಇರುವುದಿಲ್ಲ. ಅವರ ಆಯ್ಕೆಗಳನ್ನು ಪರಿಗಣಿಸಿ ಮೆರಿಟ್ ಆಧಾರದ ಮೇಲೆ ಸೀಟು ಹಂಚಿಕೆ ಮಾಡುವುದರಿಂದ ನಿಗದಿತ ದಿನಾಂಕದೊಳಗೆ ಕಡ್ಡಾಯವಾಗಿ ಪ್ರವೇಶ ಪಡೆಯಬೇಕಿದೆ. ಇಲ್ಲವಾದರೆ ನಿಯಮಾನುಸಾರ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.