ಬೆಂಗಳೂರು: ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಗೆ ಆನ್ಲೈನ್ ನಲ್ಲಿ ಅರ್ಜಿ ತುಂಬುವ ವೇಳೆ ಅಭ್ಯರ್ಥಿಗಳು ಮಾಡುವ ದೋಷ ತಡೆಯುವ ಉದ್ದೇಶದಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಇಟಿ ವಿದ್ಯಾರ್ಥಿ ಮಿತ್ರ ಎಂಬ ಮಾಸ್ಟರ್ ಟ್ರೈನರ್ ತರಬೇತಿ ಆಯೋಜಿಸಿದೆ.
ಡಿಸೆಂಬರ್ 28ರಂದು ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ತರಬೇತಿ ನಡೆಯಲಿದ್ದು, ಪ್ರತಿ ಜಿಲ್ಲೆಯಿಂದ ಆಯ್ದ 8 ಪದವಿ ಪೂರ್ವ ವಿಜ್ಞಾನ ಕಾಲೇಜಿನ ಉಪನ್ಯಾಸಕರಿಗೆ ಮಾಸ್ಟರ್ ಟ್ರೈನರ್ ತರಬೇತಿ ನೀಡಲಾಗುವುದು.
ತರಬೇತಿ ಪಡೆದವರು ತಮ್ಮ ಜಿಲ್ಲೆಗಳ ಪ್ರತಿಯೊಂದು ವಿಜ್ಞಾನ ಕಾಲೇಜಿನ ಇಬ್ಬರು ಅಧ್ಯಾಪಕರಿಗೆ ತರಬೇತಿ ನೀಡಲಿದ್ದಾರೆ. ಜನವರಿ 10 ರಿಂದ ಸಿಇಟಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದ್ದಾರೆ.
ಸಿಇಟಿ ಅರ್ಜಿ ತುಂಬುವಾಗ ಹೆಸರಿನಲ್ಲಿ ವ್ಯತ್ಯಾಸ, ತಪ್ಪು ಸಂಖ್ಯೆ ನಮೂದು, ಪ್ರವರ್ಗ, ಜಾತಿ ಬರೆಯುವುದು ಸೇರಿ ಅನೇಕ ತಪ್ಪುಗಳು ವಿದ್ಯಾರ್ಥಿಗಳಿಂದ ಆಗುತ್ತಿವೆ. ಇದನ್ನು ತಡೆಯುವ ಉದ್ದೇಶದಿಂದ ಮಾಸ್ಟರ್ ಟೈನರ್ ತರಬೇತಿ ನೀಡಲಾಗುತ್ತಿದೆ. ಅರ್ಜಿ ಸಲ್ಲಿಕೆ ವೇಳೆ ಆಗುವ ತಪ್ಪುಗಳಿಂದ ಸಿಇಟಿ ಪ್ರಕ್ರಿಯೆ ವಿಳಂಬದ ಜೊತೆಗೆ ಅಭ್ಯರ್ಥಿಗಳಿಗೆ ಇಷ್ಟಪಟ್ಟ ಕೋರ್ಸ್ ಗಳಿಗೆ ಸೀಟು ಕೈತಪ್ಪುವ ಸಾಧ್ಯತೆ ಕೂಡ ಇರುತ್ತದೆ. ಕೆಲವೊಮ್ಮೆ ಇಡೀ ಪ್ರಕ್ರಿಯೆಯಿಂದ ಹೊರ ಬೀಳುವ ಸಾಧ್ಯತೆ ಇರುತ್ತದೆ. ಇಂತಹ ಸಮಸ್ಯೆಗಳನ್ನು ನಿವಾರಿಸುವ ಉದ್ದೇಶದಿಂದ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.