ಬೆಂಗಳೂರು: ಸಿಇಟಿ 2024ಕ್ಕೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಅರ್ಜಿ ತಿದ್ದುಪಡಿಗೆ ಫೆಬ್ರವರಿ 10ರ ನಂತರ ಅವಕಾಶ ಕಲ್ಪಿಸಲಾಗುವುದು. ಅಭ್ಯರ್ಥಿಗಳು ಆತಂಕಪಡಬಾರದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ ಎಸ್. ರಮ್ಯಾ ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ರಾಜ್ಯ ದತ್ತಾಂಶ ಕೇಂದ್ರದಲ್ಲಿ ಒಂದೆರಡು ದಿನ ಸರ್ವರ್ ಡೌನ್ ಆಗಿ ಅರ್ಜಿ ಸಲ್ಲಿಸಲು ಸಮಸ್ಯೆ ಎದುರಾಗಿದ್ದು, ಅದನ್ನು ಸರಿಪಡಿಸಲಾಗಿದೆ. ಇದುವರೆಗೆ 1.25 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, 98,000 ಅಭ್ಯರ್ಥಿಗಳು ಶುಲ್ಕ ಪಾವತಿಸಿದ್ದಾರೆ. ಶುಲ್ಕ ಪಾವತಿಯಾದಲ್ಲಿ ಅರ್ಜಿ ಪರಿಶೀಲನೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದರ್ಥ ಎಂದು ತಿಳಿಸಿದ್ದಾರೆ.
ಸಿಇಟಿ ಅರ್ಜಿ ಅಪ್ಲಿಕೇಶನ್ ಕಮ್ ವೆರಿಫಿಕೇಷನ್ ಮಾಡೆಲ್ ಹೊಂದಿರುವಂತೆ ಮಾಡಲಾಗಿದ್ದು, ಅರ್ಜಿ ತುಂಬುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸ್ಯಾಟ್ಸ್ ನಂಬರ್ ಆಧರಿಸಿ ಅವರಿಗೆ ಸಂಬಂಧಿಸಿದ ಮಾಹಿತಿಗಳನ್ನು ತಂತ್ರಾಂಶ ಲಭ್ಯವಾಗಿಸಲು ಅವಕಾಶ ಕಲ್ಪಿಸಲಾಗಿದೆ. ಏಕಕಾಲದಲ್ಲಿ 20,000ಕ್ಕೂ ಹೆಚ್ಚು ಅಭ್ಯರ್ಥಿಗಳು ದತ್ತಾಂಶ ಕೋರಿದಾಗ ತಾಂತ್ರಿಕ ತೊಂದರೆಯಾಗಿತ್ತು. ಅದನ್ನು ಸರಿಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.