ಈ ಬಾರಿ ಸಿಇಟಿ ರ್ಯಾಂಕ್ ಪಟ್ಟಿ ಗೊಂದಲದಿಂದಾಗಿ ಇಂಜಿನಿಯರಿಂಗ್ ಪ್ರವೇಶಕ್ಕೆ ಸಂಬಂಧಿಸಿದಂತೆ ಕೌನ್ಸೆಲಿಂಗ್ ವಿಳಂಬವಾಗಿದೆ. ಆದರೆ ಇದೀಗ ಈ ಗೊಂದಲ ಬಗೆಹರಿದಿದ್ದು, ಆದರೆ ಸಿಇಟಿ ಹಾಗೂ ಕಾಮೆಡ್ – ಕೆ ನಡುವೆ ಯಾರು ಮೊದಲು ಕೌನ್ಸೆಲಿಂಗ್ ನಡೆಸಬೇಕು ಎಂಬ ಚರ್ಚೆ ನಡೆದಿತ್ತು.
ಇದಕ್ಕಾಗಿ ಉನ್ನತ ಶಿಕ್ಷಣ ಇಲಾಖೆಯು ಈಗಾಗಲೇ ಒಮ್ಮೆ ಸಭೆ ನಡೆಸಿದ್ದು, ಆದರೆ ಯಾವುದೇ ಅಂತಿಮ ತೀರ್ಮಾನ ಹೊರ ಬಿದ್ದಿರಲಿಲ್ಲ. ಹೀಗಾಗಿ ಮತ್ತೊಂದು ಸುತ್ತಿನ ಸಭೆ ನಡೆಸಲು ನಿರ್ಧಾರ ಕೈಗೊಂಡಿದ್ದರ ಮಧ್ಯೆ ಕಾಮೆಡ್ – ಕೆ ಗುರುವಾರ ಮಧ್ಯಾಹ್ನದಿಂದಲೇ ಕೌನ್ಸೆಲಿಂಗ್ ಆರಂಭಿಸಿದೆ.
ಇದರಿಂದಾಗಿ ಸಿಇಟಿ ಮೂಲಕ ಸೀಟು ಪಡೆದುಕೊಳ್ಳುವ ಇರಾದೆ ಹೊಂದಿದ್ದ ಬಡ ವಿದ್ಯಾರ್ಥಿಗಳು ಅನಿವಾರ್ಯವಾಗಿ ಕಾಮೆಡ್ – ಕೆ ಕೌನ್ಸೆಲಿಂಗ್ ನಲ್ಲಿ ಪಾಲ್ಗೊಳ್ಳಬೇಕಿದೆ. ಈ ಮೊದಲು ಸಿಇಟಿ ನಲ್ಲಿ ಸೀಟ್ ಸಿಗದ ಸಂದರ್ಭದಲ್ಲಿ ಮಾತ್ರ ವಿದ್ಯಾರ್ಥಿಗಳು ಕಾಮೆಡ್ – ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದರು.