ದೇಶದೆಲ್ಲೆಡೆ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ಪೂರೈಸಲು ಸರ್ಕಾರಗಳು ಶತಪ್ರಯತ್ನ ಮಾಡುತ್ತಿರುವ ನಡುವೆಯೇ ಬಿಜೆಪಿಯ ಬೂತ್ ಮಟ್ಟದ ನಾಯಕರೊಬ್ಬರಿಗೆ ಕೋವಿಡ್ ಲಸಿಕೆಯ ಐದು ಡೋಸ್‌ಗಳನ್ನು ಕೊಟ್ಟಿರುವಂತೆ ಲಸಿಕೆ ಪ್ರಮಾಣ ಪತ್ರದಲ್ಲಿ ಲಗತ್ತಿಸಲಾಗಿದ್ದು, ಆರನೇ ಲಸಿಕೆ ಪಡೆಯಲು ದಿನಾಂಕವನ್ನೂ ನಮೂದಿಸಲಾಗಿದೆ.
ಉತ್ತರ ಪ್ರದೇಶದ ಸರ್ದಾನಾ ಪ್ರದೇಶದಲ್ಲಿ ಈ ಘಟನೆ ಜರುಗಿದ್ದು, ಇದರ ಹಿಂದೆ ಏನೋ ಸಂಚಿದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಬಿಜೆಪಿ ನಾಯಕನಿಗೆ ನೀಡಲಾಗಿದೆಯಂತೆ 5 ಡೋಸ್ ಕೋವಿಡ್ ಲಸಿಕೆ..!
73 ವರ್ಷ ವಯಸ್ಸಿನ ರಾಮ್ ಪಾಲ್ ಸಿಂಗ್ ಬೂತ್ ಸಂಖ್ಯೆ 79ರ ಬಿಜೆಪಿ ಅಧ್ಯಕ್ಷರಾಗಿದ್ದಾರೆ. ಹಿಂದೂ ಯುವ ವಾಹಿನಿಯ ಸದಸ್ಯರೂ ಆಗಿರುವ ರಾಮ್‌ಪಾಲ್ ಕೋವಿಡ್ ಲಸಿಕೆಯ ಪ್ರಮಾಣ ಪತ್ರ ಡೌನ್ಲೋಡ್ ಮಾಡಿಕೊಂಡ ವೇಳೆ ಈ ಪ್ರಮಾದ ಕಂಡು ಬಂದಿದೆ. ಆರೋಗ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹೀಗಾಗುತ್ತಿದೆ ಎಂದು ರಾಮ್‌ಪಾಲ್ ಆಪಾದಿಸಿದ್ದಾರೆ.
ಮಾರ್ಚ್ 16ರಂದು ಕೋವಿಡ್ ಲಸಿಕೆಯ ಮೊದಲ ಚುಚ್ಚುಮದ್ದು ಪಡೆದ ರಾಮ್‌ಪಾಲ್ ಮೇ 8ರಂದು ಎರಡನೇ ಚುಚ್ಚುಮದ್ದು ಪಡೆದಿದ್ದರು. ಮೇ 15ರಂದು ಮೂರನೇ ಚುಚ್ಚುಮದ್ದು, ನಾಲ್ಕು ಹಾಗೂ ಐದನೇ ಚುಚ್ಚುಮದ್ದನ್ನು ಸೆಪ್ಟೆಂಬರ್ 15ರಂದು ರಾಮ್‌ಪಾಲ್ ಪಡೆದಿರುವುದಾಗಿ ಪ್ರಮಾಣ ಪತ್ರದಲ್ಲಿ ಸೂಚಿಸಲಾಗಿದೆ.
“ಮೇಲ್ನೋಟಕ್ಕೆ ಇದೊಂದು ಉದ್ದೇಶಪೂರಿತವಾದ ಕೃತ್ಯವಾಗಿದೆ ಎಂದು ತಿಳಿದು ಬರುತ್ತದೆ. ಕೆಲವೊಂದು ಕಿಡಿಗೇಡಿಗಳು ಕೋವಿನ್ ಪೋರ್ಟಲ್ ಹ್ಯಾಕ್ ಮಾಡಿದ್ದಾರೆನಿಸುತ್ತದೆ,” ಎಂದು ಮುಖ್ಯ ವೈದ್ಯಾಧಿಕಾರಿ ಅಖಿಲೇಶ್ ಮೋಹನ್ ತಿಳಿಸಿದ್ದಾರೆ.