ಗರ್ಭ ಧರಿಸಿದ ಲಕ್ಷ್ಮಿ ಹೆಸರಿನ ಅನಾಥ ಆಕಳಿಗೆ ಶಾಸ್ತ್ರೋಕ್ತವಾಗಿ ಸೀಮಂತ ನೆರವೇರಿಸಿರುವ ಘಟನೆ ವಿಜಯನಗರ ಜಿಲ್ಲೆ, ಬಸನವ ಬಾಗೇವಾಡಿ ತಾಲೂಕಿನ ಮನಗೂಳಿ ಹಿರೇಮಠದಲ್ಲಿ ನಡೆದಿದೆ.
ಈ ಆಕಳಿಗೆ ಜನ್ಮ ನೀಡಿದ ತಕ್ಷಣ ಅದರ ತಾಯಿ ತೀರಿಕೊಂಡಿತ್ತು. ಅನಾಥವಾಗಿದ್ದ ಈ ಆಕಳಿಗೆ ಬಳಿಕ ಬಾಟಲಿ ಮೂಲಕ ಹಾಲು ಕುಡಿಸಿ ಬೆಳೆಸಲಾಗಿತ್ತು. ಇದು ಗರ್ಭ ಧರಿಸಿದ ವಿಷಯ ತಿಳಿದ ಹಿರೇಮಠದ ಶ್ರೀಗಳು ಹಾಗೂ ಮಠದ ಭಕ್ತರು ಸೀಮಂತ ನೆರವೇರಿಸಲು ತೀರ್ಮಾನಿಸಿದ್ದರು.
ಅದರಂತೆ ‘ಲಕ್ಷ್ಮಿ’ ಗೆ ಸೀರೆ ತೊಡಿಸಿ ಬಗೆಬಗೆಯ ಸಿಹಿ ಅಡುಗೆ ತಯಾರಿಸಿ ಶಾಸ್ತ್ರೋಕ್ತವಾಗಿ ಸೀಮಂತ ಮಾಡಲಾಗಿದೆ. ಇದರ ನೇತೃತ್ವವನ್ನು ಅಕ್ಕನ ಬಳಗ ವಹಿಸಿದ್ದು, ಈ ಸಂದರ್ಭದಲ್ಲಿ ಮಠದ ಸಂಗನಬಸವ ಶಿವಾಚಾರ್ಯರು ಹಾಗೂ ಭಕ್ತರು ಹಾಜರಿದ್ದರು.