ಜೈಪುರ್: ಜೈಪುರದ ಸಾವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಆರು ವಿಕೆಟ್ ಗಳಿಂದ ಸೋಲು ಕಂಡಿದೆ.
ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ವ್ಯರ್ಥವಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ ಗಳಲ್ಲಿ ಮೂರು ವಿಕೆಟ್ ಗೆ 183 ರನ್ ಗಳಿಸಿತು. ವಿರಾಟ್ ಕೊಹ್ಲಿ ಅಜೇಯ 113, ನಾಯಕ ಫಾಫ್ ಡು ಪ್ಲೇಸಿಸ್ 44 ರನ್ ಗಳಿಸಿದರು. ಗೆಲುವಿನ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡ 19.1 ಓವರ್ ಗಳಲ್ಲಿ ನಾಲ್ಕು ವಿಕೆಟ್ ಗೆ 189 ರನ್ ಗಳಿಸಿತು. ಜೋಸ್ ಬಟ್ಲರ್ ಅಜೇಯ 100, ಸಂಜು ಸ್ಯಾಮ್ಸನ್ 69 ರನ್ ಗಳಿಸಿದರು.
ವಿರಾಟ್ ಕೊಹ್ಲಿ ದಾಖಲೆ
7500 ರನ್
ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 7,500 ರನ್ ಗಳ ಗಡಿ ದಾಟುವ ಮೂಲಕ ಆರ್‌ಸಿಬಿ ಬ್ಯಾಟರ್ ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಪಂದ್ಯದ 7ನೇ ಓವರ್ ನಲ್ಲಿ ಆರ್. ಅಶ್ವಿನ್ ಎಸೆದ 4ನೇ ಎಸೆತದಲ್ಲಿ ಕೊಹ್ಲಿ ಈ ವಿನೂತನ ದಾಖಲೆ ಮಾಡಿದ್ದಾರೆ. ಐಪಿಎಲ್ ನಲ್ಲಿ ಅತ್ಯಧಿಕ ರನ್ ಸರದಾರರ ಪೈಕಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅಲ್ಲದೇ ಪಂದ್ಯಾವಳಿಯಲ್ಲಿ 7,000 ರನ್ ದಾಟಿದ ಏಕೈಕ ಬ್ಯಾಟರ್ ಅವರಾಗಿದ್ದಾರೆ. ಅತ್ಯಧಿಕ ರನ್ ಗಳಿಸಿದವರ ಪೈಕಿ ಶಿಖರ್ ಧವನ್ ಎರಡನೇ ಸ್ಥಾನದಲ್ಲಿದ್ದಾರೆ. ಅವರು 6755 ರನ್ ಗಳಿಸಿದ್ದಾರೆ.
8ನೇ ಶತಕ
ಪ್ರತಿ ಪಂದ್ಯದಲ್ಲಿಯೂ ದಾಖಲೆ ಬರೆಯುತ್ತಿರುವ ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ 8ನೇ ಶತಕ ಪೂರ್ಣಗೊಳಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಐಪಿಎಲ್ ನಲ್ಲಿ ಕ್ರಿಸ್ ಗೇಲ್ 6, ಬಟ್ಲರ್ 6, ಕೆ.ಎಲ್. ರಾಹುಲ್, ವಾಟ್ಸನ್, ವಾರ್ನರ್ ತಲಾ 4 ಶತಕ ಸಿಡಿಸಿದ್ದಾರೆ.
110 ಕ್ಯಾಚ್
ಐಪಿಎಲ್ ನಲ್ಲಿ ಗರಿಷ್ಠ ಕ್ಯಾಚ್ ಪಡೆದ ಫೀಲ್ಡರ್ ಗಳ ಪಟ್ಟಿಯಲ್ಲಿ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು 110 ಕ್ಯಾಚ್ ಪಡೆದಿದ್ದಾರೆ. ರೈನಾ 109 ಕ್ಯಾಚ್ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಶತಕ ಸಿಡಿಸಿದ ಪಂದ್ಯಗಳಲ್ಲಿ ಆರ್‌ಸಿಬಿ ಸೋತಿರುವುದು ಇದು ಮೂರನೇ ಬಾರಿ.