ಗರ್ಭಿಣಿಯೊಬ್ಬರು ಕೋವಿಡ್ 19 ಲಸಿಕೆ ಅಭಿಯಾನದಲ್ಲಿ ಆದ್ಯತೆಯ ಆಧಾರದ ಮೇಲೆ ಗರ್ಭಿಣಿಯರನ್ನೂ ಸೇರಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ಸಂಬಂಧ ದೆಹಲಿ ಹೈಕೋರ್ಟ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರದ ಪರ ವಕೀಲ ಈ ವಿಚಾರವನ್ನ ಕೇಂದ್ರ ಪರಿಗಣನೆಗೆ ತೆಗೆದುಕೊಂಡಿದೆ ಹಾಗೂ ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಪರ ವಕೀಲರು ನೀಡಿರುವ ಹೇಳಿಕೆ ಆಧರಿಸಿ ನ್ಯಾ. ಅಮಿತ್ ಬನ್ಸಾಲ್ ಈ ಬಗ್ಗೆ ಹೆಚ್ಚಿನ ಆದೇಶ ನೀಡುವ ಅಗತ್ಯವಿಲ್ಲ ಎಂದು ಹೇಳಿ ಮಹಿಳೆಯ ಅರ್ಜಿಯನ್ನ ತಳ್ಳಿ ಹಾಕಿದ್ದಾರೆ.
ಗರ್ಭಿಣಿಯರ ಪರ ವಾದ ಮಂಡಿಸಿದ ವಕೀಲೆ ವಸುಧಾ ಜುಟ್ಶಿ, ಅರ್ಜಿದಾರ ಮಹಿಳೆ ಗರ್ಭಾವಸ್ಥೆಯಲ್ಲಿದ್ದಾರೆ ಹಾಗೂ ಅವರು ಆದ್ಯತೆಯ ಮೇರೆಗೆ ಕೊರೊನಾ ಲಸಿಕೆಯನ್ನ ಪಡೆಯಲು ಇಚ್ಛಿಸಿದ್ದಾರೆ. ಹೀಗಾಗಿ ಗರ್ಭಿಣಿಯರಿಗೂ ಕೊರೊನಾ ಲಸಿಕೆ ಅಭಿಯಾನದಲ್ಲಿ ಆದ್ಯತೆಯ ಆಧಾರದಲ್ಲಿ ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ ಎಂದು ಕೋರ್ಟ್ ಮುಂದೆ ಮನವಿ ಮಾಡಿದ್ದರು.
ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಹಾಗೂ ಕೇಂದ್ರ ಸರ್ಕಾರದ ಸ್ಥಾಯಿ ಸಲಹೆಗಾರ ಅನುರಾಗ್ ಅಹ್ಲುವಾಲಿಯಾ ಈ ವಿಚಾರವಾಗಿ ಮಾತನಾಡಿ, ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು ಮೇ 28ರಂದು ಅಧಿಸೂಚನೆಯೊಂದನ್ನ ಹೊರಡಿಸಿದ್ದು ಇದರಲ್ಲಿ ದೇಶದಲ್ಲಿ ಲಭ್ಯವಿರುವ ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಯನ್ನ ಗರ್ಭಿಣಿಯರು ಹಾಕಿಸಿಕೊಳ್ಳೋದರಿಂದ ಆಗುವ ಲಾಭ ಹಾಗೂ ಅಪಾಯಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ ಎಂದು ಕೋರ್ಟ್ಗೆ ತಿಳಿಸಿದ್ದಾರೆ.
ಈ ಅಧಿಸೂಚನೆಯಲ್ಲಿರುವ ಸೂಚನೆಗಳ ಪ್ರಕಾರ ಗರ್ಭಿಣಿಯು ಹತ್ತಿರದ ಕೊರೊನಾ ಲಸಿಕಾ ಕೇಂದ್ರಕ್ಕೆ ಹೋಗಿ ಯಾವಾಗ ಬೇಕಿದ್ದರೂ ಲಸಿಕೆಯನ್ನ ಪಡೆಯಬಹುದಾಗಿದೆ. ಅಲ್ಲದೇ ಬಾಣಂತಿಯರೂ ಸಹ ಲಸಿಕೆಯನ್ನ ಪಡೆಯಲು ಅರ್ಹರಾಗಿದ್ದಾರೆ ಎಂದು ಕೋರ್ಟ್ಗೆ ಮಾಹಿತಿ ಒದಗಿಸಿದ್ದಾರೆ.