
ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ತೆರವುಗೊಳಿಸಲು ಆರ್ಟಿಕಲ್ 370 ರದ್ದುಗೊಳಿಸಿದ 28 ತಿಂಗಳುಗಳಲ್ಲಿ ಕೇಂದ್ರವು ಅ ಭಾಗದ ವಿಶೇಷ ಭದ್ರತಾ ವೆಚ್ಚಕ್ಕಾಗಿ 9,000 ಕೋಟಿ ರೂ. ನೀಡಿದೆ.
ಆಗಸ್ಟ್ 5, 2019ರಂದು ಜಮ್ಮು ಮತ್ತು ಕಾಶ್ಮೀರ, ಲಡಾಖ್‌ನ ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಲಾಯಿತು. ಬಳಿಕ ಕೇಂದ್ರಾಡಳಿತ ಪ್ರದೇಶ ರಚನೆಯಾಗಿ, ಭದ್ರತಾ ಸಂಬಂಧಿತ ವೆಚ್ಚ (ಪೊಲೀಸ್) ಯೋಜನೆಯಡಿಯಲ್ಲಿ ಈ ಹಣವನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಪಾವತಿಸಲಾಗಿದೆ.
ಕೇಂದ್ರ ಗೃಹ ಇಲಾಖೆ ಇತ್ತೀಚೆಗೆ ಪ್ರಕಟಿಸಿದ ವಾರ್ಷಿಕ ವರದಿ 2020-2021ರಲ್ಲಿ ಈ ಸಂಗತಿಯನ್ನು ಉಲ್ಲೇಖಿಸಲಾಗಿದೆ. ಭದ್ರತಾ ಉಪಕರಣ ವ್ಯವಸ್ಥೆ ಬಲಪಡಿಸುವ ಉದ್ದೇಶದಿಂದ ಭಾರತ ಸರ್ಕಾರವು ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಭದ್ರತಾ ಸಂಬಂಧಿತ ವೆಚ್ಚ (ಪೊಲೀಸ್) ಯೋಜನೆಯಡಿ 9,120.69 ಕೋಟಿ ರೂಪಾಯಿಗಳನ್ನು ಒದಗಿಸಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಐದು ಇಂಡಿಯನ್ ರಿಸರ್ವ್ ಬೆಟಾಲಿಯನ್‌ಗಳು, ಎರಡು ಬಾರ್ಡರ್ ಬೆಟಾಲಿಯನ್ ಮತ್ತು ಎರಡು ಮಹಿಳಾ ಬೆಟಾಲಿಯನ್‌ಗಳನ್ನು ಹೆಚ್ಚಿಸಲು ಗೃಹ ಇಲಾಖೆ ಅನುಮೋದಿಸಿದೆ. ಐದು ಐಆರ್ ಬೆಟಾಲಿಯನ್‌ಗಳಿಗೆ ಈಗಾಗಲೇ ನೇಮಕಾತಿ ಪೂರ್ಣಗೊಂಡಿದೆ.
ಗೃಹ ವ್ಯವಹಾರಗಳ ಸಚಿವಾಲಯವು ಎಲ್ಲಾ ಭದ್ರತಾ ಏಜೆನ್ಸಿಗಳು ಮತ್ತು ರಕ್ಷಣಾ ಸಚಿವಾಲಯದೊಂದಿಗೆ ನಿಕಟವಾಗಿ ಮತ್ತು ನಿರಂತರವಾಗಿ ಭದ್ರತಾ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತದೆ.
ಗಡಿಯಾಚೆಗಿನ ಒಳನುಸುಳುವಿಕೆ ತಡೆಯುವುದು ಸೇರಿ ಬಹು ಹಂತದ ಭದ್ರತಾ ವ್ಯವಸ್ಥೆ ಸೇರಿ ಗಡಿಯ ಉದ್ದಕ್ಕೂ ನಿಯೋಜನೆ ಸಹ ಒಳಗೊಂಡಿದೆ.