ಕೇಂದ್ರ ಸರ್ಕಾರವು 2023-24ರಲ್ಲಿ ಸುಮಾರು 13,800 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಮಾಡುವ ಗುರಿಯನ್ನು ಹೊಂದಿದೆ ಎಂದು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಈಗಾಗಲೇ ಜೂನ್ 2023 ರವರೆಗೆ 2,250 ಕಿ.ಮೀ ನಿರ್ಮಿಸಲಾಗಿದೆ ಎಂದ ಸಚಿವರು, ರಸ್ತೆ ನಿರ್ಮಾಣಕ್ಕೆ ಬಳಸಲಾದ ನಿರ್ಮಾಣ ಸಾಮಗ್ರಿಗಳು ಈ ಹಿಂದೆ ಬಳಸಿದ್ದಕ್ಕಿಂತ ಉತ್ತಮ ಗುಣಮಟ್ಟವನ್ನು ಹೊಂದಿವೆ. ಕಳೆದ ಒಂಬತ್ತು ವರ್ಷಗಳಲ್ಲಿ ಭಾರತದಲ್ಲಿನ ರಾಷ್ಟ್ರೀಯ ಹೆದ್ದಾರಿಗಳ ಒಟ್ಟು ಉದ್ದವು ಸುಮಾರು 59 ಪ್ರತಿಶತದಷ್ಟು ಹೆಚ್ಚಾಗಿದೆ. ಪ್ರಸ್ತುತ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ದೇಶವು ಈಗ ಅಮೆರಿಕ ನಂತರ ಎರಡನೇ ಅತಿದೊಡ್ಡ ರಸ್ತೆ ಜಾಲವನ್ನು ಹೊಂದಿದೆ ಎಂದು ಅವರು ಹೇಳಿದ್ರು.
2013-14ರಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಒಟ್ಟು ಉದ್ದ 91,287 ಕಿಲೋಮೀಟರ್‌ಗಳಷ್ಟಿತ್ತು. ಅದು ಈಗ 2022-23ರಲ್ಲಿ 145,240 ಕಿ.ಮೀ.ಗೆ ಏರಿದೆ ಎಂದು ತಿಳಿಸಿದ್ರು.
ಅಲ್ಲದೆ, ಫಾಸ್ಟ್ಯಾಗ್ ಪರಿಚಯದೊಂದಿಗೆ ಟೋಲ್ ಸಂಗ್ರಹದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. 2013-14ರಲ್ಲಿ 4,770 ಕೋಟಿ ರೂ.ಗಳಿಂದ 2022-23ರಲ್ಲಿ 41,342 ಕೋಟಿ ರೂ.ಗೆ ಆದಾಯ ಏರಿಕೆಯಾಗಿದೆ. 2030ರ ವೇಳೆಗೆ ಟೋಲ್ ಆದಾಯವನ್ನು 130,000 ಕೋಟಿ ರೂ.ಗೆ ಹೆಚ್ಚಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಹೇಳಿದ್ರು.
ದೆಹಲಿ ರಿಂಗ್ ರೋಡ್ ಯೋಜನೆಗಾಗಿ ರಸ್ತೆ ನಿರ್ಮಾಣದಲ್ಲಿ 30 ಲಕ್ಷ ಟನ್ ಕಸವನ್ನು ಬಳಸಲಾಗಿದೆ. ತ್ಯಾಜ್ಯ ನಿರ್ವಹಣೆ ಮತ್ತು ಸುಸ್ಥಿರ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.