ನವದೆಹಲಿ: ಆ್ಯಪ್ ಸಾಲ ಸೇರಿ ಅನಿಯಂತ್ರಿತ ಸಾಲಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಹೊಸ ಕಾನೂನು ತರಲು ಮುಂದಾಗಿದೆ. ಕಠಿಣ ಕಾನೂನು ಇದಾಗಿದ್ದು, ಅಪರಾಧಿಗಳಿಗೆ 10 ವರ್ಷ ಜೈಲು ಶಿಕ್ಷೆ, ಒಂದು ಕೋಟಿ ರೂಪಾಯಿವರೆಗೆ ದಂಡ ವಿಧಿಸಲಾಗುವುದು.
ಡಿಜಿಟಲ್ ಅಥವಾ ಯಾವುದೇ ರೂಪದಲ್ಲಿ ಅನಿಯಂತ್ರಿತ ಸಾಲ ವ್ಯವಹಾರದಲ್ಲಿ ತೊಡಗಿದವರಿಗೆ ಕನಿಷ್ಠ ಎರಡು ವರ್ಷ, ಗರಿಷ್ಠ 7 ವರ್ಷ ಸೆರೆವಾಸ, ಎರಡು ಲಕ್ಷ ರೂಪಾಯಿಯಿಂದ ಒಂದು ಕೋಟಿ ರೂಪಾಯಿವರೆಗೆ ದಂಡ ವಿಧಿಸಲಾಗುವುದು. ಸಾಲ ತೆಗೆದುಕೊಂಡವರ ಶೋಷಣೆ ಮಾಡಿದವರಿಗೆ ಮೂರರಿಂದ ಹತ್ತು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು.
ಸಾಲದ ವ್ಯವಹಾರದಲ್ಲಿ ತೊಡಗಿದವರು ಅಥವಾ ಅವರ ಆಸ್ತಿಗಳು ವಿವಿಧ ರಾಜ್ಯ ಅಥವಾ ಕೇಂದ್ರ ಆಡಳಿತ ಪ್ರದೇಶಗಳಲ್ಲಿ ಇಲ್ಲವೇ ಸಾಲದ ಮೊತ್ತ ಅತ್ಯಧಿಕವಾಗಿದ್ದಲ್ಲಿ ಆ ಪ್ರಕರಣವನ್ನು ಸಿಬಿಐ ತನಿಖೆಗೆ ವರ್ಗಾಯಿಸಲಾಗುವುದು. ಅನಿಯಂತ್ರಿತ ಸಾಲ ನೀಡುವುದನ್ನು ನಿಷೇಧಿಸಲು ಮತ್ತು ಅಪರಾಧಿಗಳಿಗೆ 10 ವರ್ಷಗಳ ಜೈಲು ಶಿಕ್ಷೆಯೊಂದಿಗೆ 1 ಕೋಟಿ ರೂ. ದಂಡವನ್ನು ವಿಧಿಸುವ ಹೊಸ ಕಾನೂನನ್ನು ಸರ್ಕಾರ ಗುರುವಾರ ಪ್ರಸ್ತಾಪಿಸಿದೆ. ಅನಿಯಂತ್ರಿತ ಸಾಲ ಚಟುವಟಿಕೆಗಳ ನಿಷೇಧ(ಕರಡು) ಮಸೂದೆ ಪ್ರಕಟಿಸಿದೆ. ಈ ಹೊಸ ಮಸೂದೆಗೆ ಬಗ್ಗೆ 2025ರ ಫೆಬ್ರವರಿ 13ರವರೆಗೆ ಅಭಿಪ್ರಾಯ ತಿಳಿಸಬಹುದಾಗಿದೆ ಎಂದು ಹೇಳಲಾಗಿದೆ.