ಕೇಂದ್ರ ಆರೋಗ್ಯ ಸಚಿವಾಲಯವು ಕೋವಿಡ್ ಸೂಕ್ತ ಮಾನದಂಡಗಳೊಂದಿಗೆ ಶಾಲೆಗಳನ್ನು ಪುನಃ ತೆರೆಯುವ ಕುರಿತು ರಾಜ್ಯಗಳಿಗೆ ಸಲಹೆಯನ್ನು ನೀಡುವ ಸಾಧ್ಯತೆಯಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಶಾಲೆಗಳನ್ನ ತೆರೆಯುವಂತೆ ಪೋಷಕರು ಒತ್ತಡ ಹಾಕುತ್ತಿರುವುದರಿಂದ, ಸರ್ಕಾರ ಒಂದು ನಿರ್ದಿಷ್ಟ ಮಾದರಿಯನ್ನು ತಯಾರಿಸುತ್ತಿದೆ. ಶಾಲೆಗಳನ್ನು ತೆರೆಯಲು ಯಾವೆಲ್ಲಾ ಮಾನದಂಡಗಳನ್ನ ಮತ್ತು ಮಾರ್ಗದರ್ಶಿಗಳನ್ನ ಪಾಲಿಸಬೇಕು ಎಂದು ಆಯ್ಕೆ ಮಾಡಲು ಮತ್ತು ಪರಿಶೀಲಿಸಲು ಆರೋಗ್ಯ ಸಚಿವಾಲಯ ಈಗಾಗಲೇ ತನ್ನ ತಜ್ಞರ ತಂಡದ ಬಳಿ ಸಲಹೆ ಕೇಳಿದೆ ಎಂದು ವರದಿಯಾಗಿದೆ.
ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವುದರಿಂದ ಶಾಲಾ-ಕಾಲೇಜುಗಳನ್ನ ಮತ್ತೆ ಆರಂಭ ಮಾಡಿ ಎಂದು ಪೋಷಕರು ಮತ್ತು ಶಾಲೆಗಳಿಂದ ಬೇಡಿಕೆ ಹೆಚ್ಚಾಗುತ್ತಿದೆ. ಇದಕ್ಕೆ ಪೂರಕವಾಗಿ ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ 10 ರಿಂದ 12 ನೇ ತರಗತಿಗಳಿಗೆ ಶಾಲೆಗಳನ್ನು ಪುನರಾರಂಭಿಸುವುದಾಗಿ ಘೋಷಿಸಿವೆ.
ಮಹಾರಾಷ್ಟ್ರವು ಅತ್ಯಂತ ಪೀಡಿತ ರಾಜ್ಯವಾಗಿದ್ದರೂ, ಇಲ್ಲಿ ಎಲ್ಲಾ ವರ್ಗಗಳಿಗೆ ಶಾಲೆಯನ್ನು ಪುನಃ ತೆರೆಯಲಾಗಿದೆ. ಹರಿಯಾಣ ಮತ್ತು ಚಂಡೀಗಢದಲ್ಲು 10 ರಿಂದ 12 ನೇ ತರಗತಿಗಳಿಗೆ ಭೌತಿಕ ತರಗತಿ ಆರಂಭವಾಗಿವೆ.
ದೆಹಲಿ ಸರ್ಕಾರವು ಶಾಲೆ ಆರಂಭಕ್ಕೆ ಲೆಫ್ಟಿನೆಂಟ್ ಗವರ್ನರ್ ಅವರ ಬಳಿ ಶಿಫಾರಸು ಮಾಡಿದೆ. ತಮಿಳುನಾಡು ಸರ್ಕಾರ ಕೂಡ ಶೀಘ್ರದಲ್ಲೇ ಇದೇ ರೀತಿಯ ಘೋಷಣೆ ಮಾಡುವ ನಿರೀಕ್ಷೆಯಿದೆ. ಹೀಗಾಗಿ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಮಾರ್ಗದರ್ಶಿ ಸೂತ್ರ ನೀಡಲು ತಯಾರಾಗುತ್ತಿದೆ ಎಂದು ವರದಿಯಾಗಿದೆ.