ನವದೆಹಲಿ: ಕೊರೋನಾ ಲಸಿಕೆ ಹಂಚಿಕೆ ಕುರಿತಾಗಿ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
ಕೊರೋನಾ ವಾರಿಯರ್ಸ್ ಗೆ ಮೊದಲ ಆದ್ಯತೆಯಾಗಿ ಲಸಿಕೆ ನೀಡಲಿದ್ದು, ನಂತರ ಫ್ರಂಟ್ಲೈನ್ ವರ್ಕರ್ಸ್ ಗೆ ಲಸಿಕೆ ನೀಡಲಾಗುವುದು. ಬಳಿಕ ಬೇರೆ ರೋಗಗಳಿಂದ ಬಳಲುವವರು, 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ, ನಂತರದಲ್ಲಿ 50 ವರ್ಷಕ್ಕಿಂತ ಕೆಳಗಿನವರಿಗೆ ಆದ್ಯತೆ ಮೇಲೆ ಲಸಿಕೆ ನೀಡಲಾಗುತ್ತದೆ.
ಮಾರ್ಗಸೂಚಿ ಅನ್ವಯ ಕೊರೋನಾ ಲಸಿಕೆ ಪಡೆಯುವ ಸಾರ್ವಜನಿಕರಿಗೆ ಸರ್ಕಾರದಿಂದ ನೀಡಲಾಗುವ 12 ದಾಖಲೆಗಳಲ್ಲಿ ಯಾವುದಾದರೂ ಒಂದು ದಾಖಲೆಯನ್ನು ಕಡ್ಡಾಯವಾಗಿ ನೀಡುವಂತೆ ತಿಳಿಸಲಾಗಿದೆ. ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್, ಪಿಂಚಣಿ ದಾಖಲೆ ಸೇರಿದಂತೆ ಸರ್ಕಾರದಿಂದ ನೀಡಲಾದ 12 ದಾಖಲೆಗಳಲ್ಲಿ ಒಂದನ್ನು ನೀಡಿ ಮುಂಚಿತವಾಗಿ ನೋಂದಣಿ ಮಾಡಿಸಿಕೊಂಡವರಿಗೆ ಲಸಿಕೆ ನೀಡಲಾಗುತ್ತದೆ ಎನ್ನಲಾಗಿದೆ.
ಸ್ಥಳದಲ್ಲಿ ನೋಂದಣಿಗೆ ಅವಕಾಶ ಇರುವುದಿಲ್ಲ. ಪ್ರತಿ ಅವಧಿಯಲ್ಲಿ 200 ಜನರಿಗೆ ಲಸಿಕೆ ನೀಡಲಿದ್ದು, ಲಸಿಕೆ ಪಡೆದವರನ್ನು ಅರ್ಧ ಗಂಟೆ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಇರಿಸಬೇಕೆಂಬುದು ಸೇರಿದಂತೆ ಹಲವು ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದು ಹೇಳಲಾಗಿದೆ.