
ಕೊರೊನಾ ಎರಡನೇ ಅಲೆ ಕಡಿಮೆಯಾಗ್ತಿದ್ದು, ಮೂರನೇ ಅಲೆ ಭಯ ಶುರುವಾಗಿದೆ. ದೇಶದೊಳಗೆ ಪ್ರಯಾಣಿಸುವ ಜನರಿಗೆ ಕೋವಿಡ್ ಪ್ರೋಟೋಕಾಲ್ ಬಗ್ಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಅಂತರ್ ರಾಜ್ಯ ಪ್ರಯಾಣಕ್ಕೆ ಇಷ್ಟು ದಿನ ಕೊರೊನಾ ಪರೀಕ್ಷೆ ಕಡ್ಡಾಯವಾಗಿತ್ತು. ಆದ್ರೀಗ, ಕೇಂದ್ರ ಸರ್ಕಾರ ಇದನ್ನು ತೆಗೆದು ಹಾಕಿದೆ. ಯಾವುದೇ ರಾಜ್ಯ ಈ ನಿಯಮ ಜಾರಿಗೆ ತಂದಲ್ಲಿ ಅದ್ರ ಬಗ್ಗೆ ಅವಶ್ಯಕವಾಗಿ ಮಾಹಿತಿ ನೀಡಬೇಕಾಗುತ್ತದೆ.
ವಿಮಾನ, ರಸ್ತೆ ಮತ್ತು ರೈಲು ಪ್ರಯಾಣದ ವೇಳೆ ಪರೀಕ್ಷೆ ಕಡ್ಡಾಯಗೊಳಿಸುವ ಅಗತ್ಯವಿಲ್ಲ. ಪ್ರಯಾಣಿಕರಿಗೆ ಪ್ರಯಾಣದಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ಸರ್ಕಾರ ಸಲಹೆ ನೀಡಿದೆ. ಲಸಿಕೆ ಪಡೆದ ಪ್ರಮಾಣಪತ್ರಗಳನ್ನು ಹೊಂದಿರುವವರಿಂದ ಆರ್ಟಿಪಿಸಿಆರ್ ಪರೀಕ್ಷಾ ವರದಿ ಕೇಳದಂತೆ ರಾಜ್ಯಗಳಿಗೆ ಮನವಿ ಮಾಡಲಾಗಿದೆ. 14 ದಿನಗಳ ಹಿಂದೆ ಕೊರೊನಾ ಪಾಸಿಟಿವ್ ಆಗಿದ್ದವರಿಗೂ ವಿನಾಯಿತಿ ನೀಡಬೇಕೆಂದು ಹೇಳಲಾಗಿದೆ.
ಒಂದು ಲಸಿಕೆಯಾದಲ್ಲಿ ಅಥವಾ ಎರಡು ಲಸಿಕೆ ಪಡೆದು 15 ದಿನ ಕಳೆದಿದ್ದರೆ ಆರ್ ಟಿ ಪಿ ಸಿ ಆರ್ ಪರೀಕ್ಷೆ ಅಗತ್ಯವಿಲ್ಲವೆಂದು ಕೇಂದ್ರ ಹೇಳಿದೆ. ಒಂದು ವೇಳೆ ರಾಜ್ಯಕ್ಕೆ ಪ್ರವೇಶ ಮಾಡಿದ ನಂತ್ರ ಜ್ವರದ ಲಕ್ಷಣಗಳು ಕಾಣಿಸಿಕೊಂಡರೆ ಕ್ಷಿಪ್ರ ಪರೀಕ್ಷೆಗೆ ಒಳಗಾಗಬೇಕೆಂದು ಸರ್ಕಾರ ಹೇಳಿದೆ.