ನವದೆಹಲಿ: ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ವಾರದಲ್ಲಿ 4 ದಿನ ಕೆಲಸ ಅಥವಾ ವಾರಕ್ಕೆ 40 ಗಂಟೆ ಕೆಲಸ ವ್ಯವಸ್ಥೆಯನ್ನು ಪರಿಚಯಿಸುವ ಯಾವುದೇ ಯೋಜನೆ ಇಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ಸ್ಪಷ್ಟಪಡಿಸಿದೆ.
ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಅವರು ಲೋಕಸಭೆಯಲ್ಲಿ ಈ ಬಗ್ಗೆ ಮಾತನಾಡಿ, ಪ್ರಸ್ತುತ ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ವಾರದಲ್ಲಿ 4 ದಿನ ಅಥವಾ ವಾರದಲ್ಲಿ 40 ಗಂಟೆಗಳ ಕಾಲ ಕೆಲಸ ಮಾಡುವ ವ್ಯವಸ್ಥೆಯನ್ನು ಪರಿಚಯಿಸುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಮಾಹಿತಿ ನೀಡಿದ್ದಾರೆ.
ಭಾರತ ಸರ್ಕಾರದ ಆಡಳಿತ ಕಛೇರಿಗಳಲ್ಲಿ ಕೆಲಸದ ದಿನ, ರಜಾದಿನ, ಕೆಲಸದ ಸಮಯವನ್ನು ಆಯಾ ಕೇಂದ್ರ ವೇತನ ಆಯೋಗಗಳು ಶಿಫಾರಸು ಮಾಡುತ್ತವೆ. 4 ನೇ ವೇತನ ಆಯೋಗದ ಶಿಫಾರಸಿನ ಆಧಾರದ ಮೇಲೆ ನಾಗರಿಕ ಆಡಳಿತ ಕಛೇರಿಗಳಲ್ಲಿ ವಾರದಲ್ಲಿ 5 ದಿನಗಳು ಮತ್ತು ದಿನಕ್ಕೆ 8.30 ಗಂಟೆ ಕೆಲಸ ಮಾಡಲಾಗುತ್ತಿದೆ.
ಯಥಾಸ್ಥಿತಿ ಕಾಯ್ದುಕೊಳ್ಳಲು 7 ನೇ ವೇತನ ಆಯೋಗ ಶಿಫಾರಸು ಮಾಡಿದೆ. ಮೊದಲು 4ನೇ ವೇತನ ಆಯೋಗ ಶಿಫಾರಸುಗಳ ನಂತರ ಕೇಂದ್ರ ಸರ್ಕಾರ 5 ದಿನಗಳ ಕೆಲಸದ ವಾರವನ್ನು ಪರಿಚಯಿಸಿದ್ದು, ಉದ್ಯೋಗಿಗಳಿಗೆ ಹೆಚ್ಚಿನ ವಿರಾಮ ಸಮಯವನ್ನು ನೀಡುವುದು ಇದರ ಉದ್ದೇಶವಾಗಿತ್ತು ಎಂದು ಹೇಳಿದ್ದಾರೆ.