ದೀಪಾವಳಿ ಹಬ್ಬಕ್ಕೂ ಮುನ್ನವೇ ಗೋಧಿಪ್ರಿಯರಿಗೆ ಕೇಂದ್ರ ಸರ್ಕಾರ ಗುಡ್ನ್ಯೂಸ್ ನೀಡಿದೆ. ಗ್ರಾಹಕರಿಗೆ ಹೆಚ್ಚಿನ ಬೆಲೆ ಗೋಧಿ ಖರೀದಿಯಿಂದ ಮುಕ್ತಿ ನೀಡುವ ಸಲುವಾಗಿ ದೇಶಾದ್ಯಂತ ಭಾರತ್ ಆಟ್ಟಾ ಬ್ರ್ಯಾಂಡ್ನಲ್ಲಿ ಪ್ರತಿ ಕೆಜಿಗೆ 27.50 ರೂಪಾಯಿಗಳ ಸಬ್ಸಿಡಿ ದರದಲ್ಲಿ ಗೋಧಿ ಹಿಟ್ಟಿನ ಮಾರಾಟವನ್ನು ಕೇಂದ್ರ ಸರ್ಕಾರ ಸೋಮವಾರದಿಂದ ಆರಂಭಿಸಿದೆ.
ಭಾರತ್ ಆಟ್ಟಾವನ್ನು ಸಹಕಾರಿ ಸಂಸ್ಥೆಗಳಾದ NAFED, NCCF ಮತ್ತು ಕೇಂದ್ರೀಯ ಭಂಡಾರ್ ಮೂಲಕ 800 ಮೊಬೈಲ್ ವ್ಯಾನ್‌ಗಳು ಮತ್ತು 2,000ಕ್ಕೂ ಅಧಿಕ ಮಳಿಗೆಗಳಲ್ಲಿ ದೇಶಾದ್ಯಂತ ಮಾರಾಟ ಮಾಡಲಾಗುವುದು ಅಂತಾ ಕೇಂದ್ರ ಸರ್ಕಾರ ತಿಳಿಸಿದೆ. ಸಬ್ಸಿಡಿ ದರವು ಆಯಾ ಸ್ಥಳದ ಮಾರುಕಟ್ಟೆ ದರಕ್ಕಿಂತ ಕಡಿಮೆ ಇರುತ್ತದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಫೆಬ್ರವರಿ ತಿಂಗಳಲ್ಲಿ ಕೇಂದ್ರ ಸರ್ಕಾರವು ಬೆಲೆ ಸ್ಥಿರೀಕರಣ ನಿಧಿ ಯೋಜನೆಯ ಭಾಗವಾಗಿ ಕೆಲವು ಮಳಿಗೆಗಳಲ್ಲಿ ಭಾರತ್ ಆಟ್ಟಾದ ಪ್ರಾಯೋಗಿಕ ಮಾರಾಟವನ್ನು ನಡೆಸಿತ್ತು. ಇಲ್ಲಿ ಪ್ರತಿ ಕೆಜಿ ಗೋಧಿಗೆ 29.50 ರೂಪಾಯಿಗಳಂತೆ 18 ಸಾವಿರ ಟನ್ ಗೋಧಿ ಮಾರಾಟ ಮಾಡಿತ್ತು.
ಕೇಂದ್ರ ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಪಿಯೂಷ್ ಗೋಯೆಲ್, ರಾಷ್ಟ್ರ ರಾಜಧಾನಿ ದೆಹಲಿಯ ಕರ್ತವ್ಯಪಥದಲ್ಲಿ ಭಾರತ್ ಆಟ್ಟಾದ 100 ಸಂಚಾರಿ ವಾಹನಗಳಿಗೆ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಕೇಂದ್ರ ಸಚಿವ ಪಿಯೂಷ್ ಗೋಯೆಲ್, ಈ ಯೋಜನೆಯ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದೇವೆ. ದೇಶದೆಲ್ಲೆಡೆ 27.50 ರೂಪಾಯಿಗೆ 1 ಕೆಜಿ ಗೋಧಿ ಹಿಟ್ಟು ಮಾರಾಟವಾಗಲಿದೆ ಎಂದು ಹೇಳಿದ್ರು.