ನವದೆಹಲಿ: ದೇಶದಲ್ಲಿನ ಪ್ರಸ್ತುತ ಕೋವಿಡ್ ಪರಿಸ್ಥಿತಿಯನ್ನು ಆಧರಿಸಿ ಎರಡನೇ ಬೂಸ್ಟರ್ ಡೋಸ್ ನೀಡುವ ಅಗತ್ಯವಿಲ್ಲ ಎಂದು ಹೇಳಲಾಗಿದೆ.
ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ ಕೇವಲ 134 ಹೊಸ ಕರೋನವೈರಸ್ ಪ್ರಕರಣಗಳು ದಾಖಲಾಗಿವೆ ಎಂದು ಮಂಗಳವಾರ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತೋರಿಸಿವೆ.
ಈಗ ಯಾವುದೇ ಎರಡನೇ ಕೋವಿಡ್-19 ಬೂಸ್ಟರ್ ಡೋಸ್ ಅಗತ್ಯವಿಲ್ಲ, ಮೊದಲು ನಾವು ದೇಶದಲ್ಲಿ ಮೊದಲ ಬೂಸ್ಟರ್ ಡ್ರೈವ್ ಅನ್ನು ಪೂರ್ಣಗೊಳಿಸಬೇಕಾಗಿದೆ. ಎರಡನೇ ಬೂಸ್ಟರ್ ಕುರಿತು ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು(ಎನ್‌ಟಿಜಿಐ) ನಲ್ಲಿ ಸಹ ಯಾವುದೇ ಚರ್ಚೆಯನ್ನು ಪ್ರಾರಂಭಿಸಲಾಗಿಲ್ಲ. ದೇಶದಲ್ಲಿ ಮೊದಲ ಬೂಸ್ಟರ್ ಡ್ರೈವ್ ಅನ್ನು ಪೂರ್ಣಗೊಳಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಹೇಳಲಾಗಿದೆ.
ಇತ್ತೀಚೆಗೆ ಭಾರತೀಯ ವೈದ್ಯಕೀಯ ಸಂಘ (ಐಎಂಎ), ಇತರ ವೈದ್ಯರು ಮತ್ತು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ನಡುವೆ ದೇಶದಲ್ಲಿ ಕೋವಿಡ್ -19 ಪರಿಸ್ಥಿತಿ ಮತ್ತು ಸನ್ನದ್ಧತೆಯ ಕುರಿತು ನಡೆದ ವರ್ಚುವಲ್ ಸಭೆಯಲ್ಲಿ, ಕೆಲವು ತಜ್ಞರು ಎರಡನೇ ಬೂಸ್ಟರ್ ಡೋಸ್ ಬಗ್ಗೆ ಚರ್ಚಿಸಿ ಆರು ತಿಂಗಳ ಹಿಂದೆ ಬೂಸ್ಟರ್ ಡೋಸ್ ನೀಡಲಾಗಿದ್ದು, ಮತ್ತೊಮ್ಮೆ ಬೂಸ್ಟರ್ ಡೋಸ್ ನೀಡಬಹುದೇ ಎಂದು ಸಮಾಲೋಚನೆ ನಡೆಸಿದ್ದಾರೆ.
ಭಾರತದ ಕೊರೋನಾ ವೈರಸ್ ಟಾಸ್ಕ್ ಫೋರ್ಸ್ ಗುಂಪಿನ ರಾಷ್ಟ್ರೀಯ ಪರೀಕ್ಷಾ ಸಲಹಾ ಗುಂಪಿನ(ಎನ್‌ಟಿಜಿಐ) ಮುಖ್ಯಸ್ಥ ಡಾ.ಎನ್.ಕೆ. ಅರೋರಾ ನೇಸಲ್ ಲಸಿಕೆಯನ್ನು ಮೊದಲ ಬೂಸ್ಟರ್ ಆಗಿ ಬಳಸಬಹುದು ಎಂದು ಉಲ್ಲೇಖಿಸಿದ್ದರು.