ನವದೆಹಲಿ: ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಲ್ಲಿ ಯುವಕರನ್ನು ನೇಮಿಸಿಕೊಳ್ಳಲು ಅಗ್ನಿಪಥ್ ಯೋಜನೆಗೆ ಕೇಂದ್ರ ಅನುಮತಿ ನೀಡಿದೆ.
ಸಶಸ್ತ್ರ ಪಡೆಗಳಲ್ಲಿ ಯುವಕರ ನೇಮಕಾತಿಗಾಗಿ ಅಗ್ನಿಪಥ್ ಯೋಜನೆಗೆ ಕೇಂದ್ರವು ಇಂದು ಅನುಮತಿ ನೀಡಲಾಗಿದೆ ಎಂದು ನವದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಈ ಯೋಜನೆಯಡಿ ಆಯ್ಕೆಯಾದ ಯುವಕರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ. ಅಪಾಯ ಮತ್ತು ಕಷ್ಟದ ಭತ್ಯೆಗಳೊಂದಿಗೆ(Risk and Hardship allowances) ಆಕರ್ಷಕ ಮಾಸಿಕ ಪ್ಯಾಕೇಜ್ ಪಡೆಯಲಿದ್ದಾರೆ ಎಂದು ಅವರು ಹೇಳಿದರು.
ನಾಲ್ಕು ವರ್ಷಗಳ ಎಂಗೇಜ್ ಮೆಂಟ್ ಅವಧಿ ಪೂರ್ಣಗೊಂಡ ನಂತರ ಅಗ್ನಿವೀರ್ ಗಳಿಗೆ ಒಂದು ಬಾರಿ ಸೇವಾ ನಿಧಿ ಪ್ಯಾಕೇಜ್ ಸಹ ಪಾವತಿಸಲಾಗುವುದು. ಅಗ್ನಿಪಥ್ ಯೋಜನೆಯು ದೇಶಭಕ್ತಿ ಮತ್ತು ಸೇನೆ ಸೇರಬಯಸುವ ಯುವಕರಿಗೆ ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅನುವು ಮಾಡಿಕೊಡುತ್ತದೆ. ಈ ವರ್ಷ ನಲವತ್ತಾರು ಸಾವಿರಕ್ಕೂ ಹೆಚ್ಚು ಅಗ್ನಿವೀರರನ್ನು ನೇಮಕ ಮಾಡಿಕೊಳ್ಳಲಾಗುವುದು.
ಏರ್ ಸ್ಟಾಫ್ ಚೀಫ್ ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ ಮಾತನಾಡಿ, ಈ ಯೋಜನೆಯು ವಾಯುಪಡೆಗೆ ದೇಶದಲ್ಲಿ ಲಭ್ಯವಿರುವ ಅಪಾರ ಪ್ರತಿಭೆಗಳನ್ನು ಸೆಳೆಯಲು ಅವಕಾಶವನ್ನು ನೀಡುತ್ತದೆ, ಇದರಿಂದಾಗಿ ಅವರು ಸಶಸ್ತ್ರ ಪಡೆಗಳಲ್ಲಿ ಹೆಮ್ಮೆಯಿಂದ ಸೇವೆ ಸಲ್ಲಿಸಬಹುದು. ವಾಯುಯಾನ, ಶಸ್ತ್ರಾಸ್ತ್ರಗಳು ಮತ್ತು ಅತ್ಯಾಧುನಿಕ ವ್ಯವಸ್ಥೆಗಳಲ್ಲಿ ಅಗ್ನಿವೀರ್ ಗಳಿಗೆ ತರಬೇತಿಯನ್ನು IAF ನೀಡಲಿದೆ ಎಂದು ಹೇಳಿದರು.
ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್. ಹರಿಕುಮಾರ್ ಮಾತನಾಡಿ, ಅಗ್ನಿಪಥ್ ಯೋಜನೆಯು ಹೊಸ ಚಿಂತನೆಯ ಯುಗವಾಗಿದೆ. ಇದು ಸಶಸ್ತ್ರ ಪಡೆಗಳ ಮಾನವ ಸಂಪನ್ಮೂಲ ನಿರ್ವಹಣೆಯ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ನೌಕಾಪಡೆಯಲ್ಲೀಗ ಮಹಿಳಾ ಅಧಿಕಾರಿಗಳು ಇದ್ದಾರೆ. ಅಗ್ನಿವೀರ್ ಯೋಜನೆಯೊಂದಿಗೆ ಮಹಿಳಾ ನಾವಿಕರು ಸಹ ಸೇರ್ಪಡೆಗೊಳ್ಳುತ್ತಾರೆ. ಇದೊಂದು ಪ್ರಮುಖ ಹೆಜ್ಜೆಯಾಗಿದೆ ಎಂದರು.
ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಮಾತನಾಡಿ, ಅಗ್ನಿಪಥ್ ಯೋಜನೆಯು ಸೇನೆ ಮತ್ತು ರಾಷ್ಟ್ರಕ್ಕೆ ಪರಿವರ್ತನೆಯ ಸುಧಾರಣೆಯಾಗಿದೆ. ಇದು ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಮಾದರಿ ಬದಲಾವಣೆಯನ್ನು ತರುವ ಗುರಿ ಹೊಂದಿದೆ. ಯುವಕರು ಮತ್ತು ಅನುಭವಿ ಸಿಬ್ಬಂದಿ ನಡುವೆ ಸಮತೋಲನ ಕಾಪಾಡುತ್ತದೆ ಎಂದರು.
ಅಗ್ನಿವೀರರು ತಿಂಗಳಿಗೆ 30,000 ರೂಪಾಯಿಗಳಿಂದ 40,000 ರೂಪಾಯಿಗಳವರೆಗೆ ವೇತನ ಮತ್ತು ಭತ್ಯೆ ಪಡೆಯುತ್ತಾರೆ. ಸೇವಾ ನಿಧಿಗೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ. ಗ್ರಾಚ್ಯುಟಿ ಮತ್ತು ಪಿಂಚಣಿ ಪ್ರಯೋಜನಗಳಿಗೆ ಯಾವುದೇ ಅರ್ಹತೆ ಇರುವುದಿಲ್ಲ. ಅಗ್ನಿವೀರ್ ಗಳಿಗೆ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಎಂಗೇಜ್ ಮೆಂಟ್ ಅವಧಿಯವರೆಗೆ 48 ಲಕ್ಷ ರೂಪಾಯಿಗಳ ಕೊಡುಗೆ ರಹಿತ ಜೀವ ವಿಮಾ ಕವರ್ ಒದಗಿಸಲಾಗುತ್ತದೆ ಎಂದು ಹೇಳಲಾಗಿದೆ.
ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಈ ಅವಧಿಯಲ್ಲಿ, ಅಗ್ನಿವೀರರಿಗೆ ವಿವಿಧ ಮಿಲಿಟರಿ ಕೌಶಲ್ಯ ಮತ್ತು ಅನುಭವ, ಶಿಸ್ತು, ದೈಹಿಕ ಸಾಮರ್ಥ್ಯ, ನಾಯಕತ್ವದ ಗುಣಗಳು, ಧೈರ್ಯ ಮತ್ತು ದೇಶಪ್ರೇಮವನ್ನು ನೀಡಲಾಗುವುದು. ನಾಲ್ಕು ವರ್ಷಗಳ ಈ ಅವಧಿಯ ನಂತರ, ಅಗ್ನಿವೀರರು ನಾಗರಿಕ ಸಮಾಜಕ್ಕೆ ಮರಳಲಿದ್ದಾರೆ.
25 ಪ್ರತಿಶತದಷ್ಟು ಅಗ್ನಿವೀರ್ ಗಳನ್ನು ಸಶಸ್ತ್ರ ಪಡೆಗಳಲ್ಲಿ ಸಾಮಾನ್ಯ ಕೇಡರ್‌ನಂತೆ ದಾಖಲಾತಿಗಾಗಿ ಆಯ್ಕೆ ಮಾಡಲಾಗುತ್ತದೆ. ಅವರು ಕನಿಷ್ಠ 15 ವರ್ಷಗಳ ಮುಂದಿನ ಅವಧಿಗೆ ಸೇವೆ ಸಲ್ಲಿಸಬಹುದು ಎನ್ನಲಾಗಿದೆ.