ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮ ಬೆಂಬಲಿಗರು ಮತ್ತು ಓವರ್ ಗ್ರೌಂಡ್ ವರ್ಕರ್ಸ್(OGW) ಜೊತೆಗೆ ಸಂವಹನ ನಡೆಸಲು ಮತ್ತು ಪಾಕಿಸ್ತಾನದಿಂದ ಸೂಚನೆಗಳನ್ನು ಸ್ವೀಕರಿಸಲು ಭಯೋತ್ಪಾದಕ ಗುಂಪುಗಳು ಬಳಸುತ್ತಿದ್ದ 14 ಮೊಬೈಲ್ ಮೆಸೆಂಜರ್ ಅಪ್ಲಿಕೇಶನ್‌ಗಳನ್ನು ಕೇಂದ್ರವು ನಿಷೇಧಿಸಿದೆ.
ನಿಷೇಧಿತ ಆ್ಯಪ್‌ಗಳಲ್ಲಿ ಕ್ರಿಪ್‌ವೈಸರ್, ಎನಿಗ್ಮಾ, ಸೇಫ್ಸ್ವಿಸ್, ವಿಕ್ರಮ್, ಮೀಡಿಯಾಫೈರ್, ಬ್ರಿಯಾರ್, ಬಿಚಾಟ್, ನ್ಯಾಂಡ್‌ಬಾಕ್ಸ್, ಕೊನಿಯನ್, ಐಎಂಒ, ಎಲಿಮೆಂಟ್, ಸೆಕೆಂಡ್ ಲೈನ್, ಜಂಗಿ ಮತ್ತು ಥ್ರೀಮಾ ಸೇರಿವೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಮೂಲಗಳು ತಿಳಿಸಿವೆ.
ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ರ ಸೆಕ್ಷನ್ 69A ಅಡಿಯಲ್ಲಿ ಈ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಲಾಗಿದೆ.
ಭದ್ರತಾ ಮತ್ತು ಗುಪ್ತಚರ ಸಂಸ್ಥೆಗಳ ಶಿಫಾರಸಿನ ಮೇರೆಗೆ ಸಚಿವಾಲಯ ಈ ಕ್ರಮ ಕೈಗೊಂಡಿದೆ.
ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟು ಮಾಡುವ ಮತ್ತು ಭಾರತೀಯ ಕಾನೂನುಗಳನ್ನು ಅನುಸರಿಸದ ಅಪ್ಲಿಕೇಶನ್‌ಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಮತ್ತು ಅವುಗಳನ್ನು ನಿಷೇಧಿಸಲು ವಿನಂತಿಯನ್ನು ಸಂಬಂಧಿಸಿದ ಸಚಿವಾಲಯಕ್ಕೆ ತಿಳಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ ವಿರೋಧಿ ಪ್ರಚಾರವನ್ನು ಹರಡಲು ಭಯೋತ್ಪಾದಕರು ಈ ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ ಎಂದು ಗುಪ್ತಚರ ಸಂಸ್ಥೆಗಳು ಈ ಹಿಂದೆ ಸರ್ಕಾರಕ್ಕೆ ಮಾಹಿತಿ ನೀಡಿದ್ದವು.