
ನವದೆಹಲಿ: ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವ ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ 180 ದಿನಗಳ ಹೆರಿಗೆ ರಜೆ ನೀಡಲಾಗುವುದು.
ಸರ್ಕಾರಿ ನೌಕರಿಯಲ್ಲಿರುವ ಮಹಿಳೆ ಬಾಡಿಗೆ ತಾಯ್ತನದ ಮೂಲಕ ಮಗು ಪಡೆದರೆ ಇನ್ನು ಮುಂದೆ 180 ದಿನ ಮಾತೃತ್ವ ರಜೆ ತೆಗೆದುಕೊಳ್ಳಲು ಅವಕಾಶ ನೀಡಲು ತೀರ್ಮಾನಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ 50 ವರ್ಷಗಳ ಹಿಂದಿನ ಕಾಯ್ದೆಗೆ ತಿದ್ದುಪಡಿ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
ಕೇಂದ್ರ ನಾಗರಿಕ ಸೇವೆಗಳ -ರಜೆ ನಿಯಮ -1972 ಕಾಯ್ದೆಗೆ ತಿದ್ದುಪಡಿ ತರಲಾಗುವುದು. ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವ ತಾಯಿಗೆ ಮಾತೃತ್ವ ರಜೆ ಹಾಗೂ ತಂದೆಗೆ 15 ದಿನಗಳ ಪಿತೃತ್ವ ರಜೆ ಅವಕಾಶ ಸಿಗಲಿದೆ.
ತಿದ್ದುಪಡಿ ನಿಯಮಗಳ ಬಗ್ಗೆ ಕೇಂದ್ರ ಸಿಬ್ಬಂದಿ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಎರಡಕ್ಕಿಂತ ಕಡಿಮೆ ಮಕ್ಕಳಿರುವ ಸರ್ಕಾರಿ ಮಹಿಳಾ ನೌಕರರಿಗೆ ಮಕ್ಕಳ ಆರೈಕೆ ರಜೆ ನೀಡಲಾಗುವುದು. ಬಾಡಿಗೆ ತಾಯ್ತನದ ಮೂಲಕ ಮಗು ಹೊಂದುವ ಪ್ರಕರಣಗಳಲ್ಲಿ ಮಗು ಇರುವ ತಾಯಿ ಹಾಗೂ ಮಗು ಪಡೆಯಲಿರುವ ತಾಯಿ ಎರಡಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿದ್ದರೆ 180 ದಿನಗಳ ಮಾತೃತ್ವ ರಜೆ ಪಡೆದುಕೊಳ್ಳಬಹುದು ಎಂದು ಹೇಳಲಾಗಿದೆ.