ಚಂಡೀಗಢ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ಕೈಗೊಂಡಿರುವ ರೈತರು ದೆಹಲಿಗೆ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ದೆಹಲಿಯಲ್ಲಿ ಆಂದೋಲನ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಕ್ರಾಂತಿಕಾರಿ ಕಿಸಾನ್ ಯೂನಿಯನ್ ಅಧ್ಯಕ್ಷ ದರ್ಶನ್ ಪಾಲ್ ತಿಳಿಸಿದ್ದಾರೆ.
ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ಪಂಜಾಬ್ ರೈತಸಂಘಟನೆಗಳು ಶುಕ್ರವಾರ ದೆಹಲಿಯಲ್ಲಿ ಬುರಾರಿ ಮೈದಾನದಲ್ಲಿ ಹೋರಾಟ ನಡೆಸಲು ದೆಹಲಿಯತ್ತ ಹೊರಟಿದ್ದರು. ಆದರೆ, ಹರಿಯಾಣ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ರೈತರ ಹೋರಾಟಕ್ಕೆ ತಡೆ ಹಾಕುವ ಪ್ರಯತ್ನ ನಡೆಸಿತು. ಪಂಜಾಬ್ -ಹರಿಯಾಣ ಗಡಿಯಲ್ಲಿ ದೆಹಲಿಗೆ ಹೊರಟಿದ್ದ ರೈತರನ್ನು ಚದುರಿಸಲು ಜಲಫಿರಂಗಿ ಪ್ರಯೋಗಿಸಲಾಯಿತು. ದೆಹಲಿಗೆ ಪ್ರವೇಶಿಸಲು ರೈತರಿಗೆ ಅವಕಾಶ ಸಿಗದಂತಾಗಿತ್ತು. ಆದರೂ ರೈತರು ಹೋರಾಟವನ್ನು ಮುಂದುವರೆಸಿದ್ದರು.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಕಾನೂನುಗಳ ವಿರುದ್ಧದ ಪ್ರತಿಭಟನೆಯನ್ನು ನಿಲ್ಲಿಸಬೇಕು ಎಂದು ರೈತರಿಗೆ ಮನವಿ ಮಾಡಿದ್ದರು. ಮುಂದಿನವಾರ ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುವುದಾಗಿ ಅವರು ಭರವಸೆ ನೀಡಿದ್ದಲ್ಲದೇ, ಕೊರೋನಾ ಮತ್ತು ಚಳಿಗಾಲದ ಕಾರಣದಿಂದ ಹೋರಾಟ ಕೈಬಿಡಬೇಕೆಂದು ರೈತರಿಗೆ ಮನವಿ ಮಾಡಿದ್ದರು.
ಆದರೂ, ರೈತರು ಆಕ್ರೋಶದಿಂದ ಹೋರಾಟ ಕೈಗೊಂಡಿದ್ದು, ಹೋರಾಟ ತಡೆಯುವ ಪ್ರಯತ್ನ ಫಲಿಸಲಿಲ್ಲ. ಕೊನೆಗೆ ರೈತರ ದೆಹಲಿ ಪ್ರವೇಶಕ್ಕೆ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ನಮಗೆ ದೆಹಲಿಗೆ ಸುರಕ್ಷಿತವಾಗಿ ಹೋಗಲು ಅನುಮತಿ ನೀಡಲಾಗಿದೆ ಎಂದು ಕಿಸಾನ್ ಯೂನಿಯನ್ ಅಧ್ಯಕ್ಷ ದರ್ಶನ್ ಪಾಲ್ ತಿಳಿಸಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಕೂಡ ಈ ಬಗ್ಗೆ ಮಾಹಿತಿ ನೀಡಿ, ಪ್ರತಿಭಟಿಸುವುದು ಪ್ರಜಾಪ್ರಭುತ್ವದ ಹಕ್ಕು. ಅದರಂತೆ ರೈತರು ಕೈಗೊಂಡಿದ್ದು, ಅವರು ದೆಹಲಿಗೆ ಪ್ರವೇಶಿಸಲು ಅವಕಾಶ ನೀಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದು ತಿಳಿಸಿದ್ದಾರೆ.