ನವದೆಹಲಿ: ವಕ್ಪ್ ಮಂಡಳಿಯಲ್ಲಿ ಪಾರದರ್ಶಕತೆ ಮತ್ತು ಲಿಂಗ ವೈವಿಧ್ಯತೆ ತರುವ ಮೂಲಕ ಯಾವುದೇ ಆಸ್ತಿಯನ್ನು ಆಸ್ತಿ ಎಂದು ಘೋಷಿಸುವ ಮತ್ತು ಅದರ ನಿಯಂತ್ರಣವನ್ನು ತೆಗೆದುಕೊಳ್ಳುವ ವಕ್ಫ್ ಮಂಡಳಿಗಳ ಅನಿರ್ಬಂಧಿತ ಅಧಿಕಾರ ನಿರ್ಬಂಧಿಸಲು ನಿರ್ಧರಿಸಲಾಗಿದೆ.
ಯಾವುದೇ ಆಸ್ತಿಗಳನ್ನು ಗುರುತಿಸಿ ಅದನ್ನು ತನ್ನ ನಿಯಂತ್ರಣಕ್ಕೆ ಪಡೆಯುವುದು ಸೇರಿದಂತೆ ವಕ್ಪ್ ಮಂಡಳಿಗಳ ಹಲವು ಅಧಿಕಾರಗಳಿಗೆ ಅಂಕುಶ ಹಾಕಲು ಕಾನೂನು ತಿದ್ದುಪಡಿಗೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಶುಕ್ರವಾರ ರಾತ್ರಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ವಕ್ಫ್ ಕಾಯ್ದೆಗೆ 40ಕ್ಕೂ ಹೆಚ್ಚು ತಿದ್ದುಪಡಿ ತರುವ ಬಗ್ಗೆ ಚರ್ಚೆ ನಡೆಸಲಾಗಿದೆ. ಕಾಯ್ದೆಗೆ ತಿದ್ದುಪಡಿ ತರುವ ವಿಧೇಯಕವನ್ನು ವಾರದೊಳಗೆ ಸಂಸತ್ತಿನಲ್ಲಿ ಮಂಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ವಕ್ಪ್ ಮಂಡಳಿಯಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಕಲ್ಪಿಸುವುದು ಕೂಡ ಈ ತಿದ್ದುಪಡಿಯಲ್ಲಿ ಸೇರಿದೆ. ಪ್ರಸ್ತುತ ದೇಶಾದ್ಯಂತ ವಕ್ಫ್ ಮಂಡಳಿಗಳು 9.4 ಲಕ್ಷ ಎಕರೆ ವಿಸ್ತೀರ್ಣದ 8.7 ಲಕ್ಷ ಆಸ್ತಿಗಳನ್ನು ಹೊಂದಿವೆ. ಆಸ್ತಿಗಳ ದುರ್ಬಳಕೆ ತಡೆಯಲು ಮಂಡಳಿಗಳ ಆಸ್ತಿಗಳ ನಿರ್ವಹಣೆಯಲ್ಲಿ ಜಿಲ್ಲಾಧಿಕಾರಿಗಳನ್ನು ತೊಡಗಿಸಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ.
ವಕ್ಫ್ ಬೋರ್ಡ್ ನಿರ್ಧಾರಗಳನ್ನು ಸ್ವತಃ ಹೈಕೋರ್ಟ್ ಗಳು ಪ್ರಶ್ನಿಸುವಂತಿಲ್ಲ ಎಂಬ ಮಂಡಳಿಯ ಆಕ್ಷೇಪಕ್ಕೆ ಹಲವು ಹೈಕೋರ್ಟ್ ಗಳು, ಮುಸ್ಲಿಂ ಜಡ್ಜ್ ಗಳ ಆಕ್ಷೇಪ, ತಿದ್ದುಪಡಿಗೆ ಮುಸ್ಲಿಂ ಸಮುದಾಯದಿಂದಲೇ ಒತ್ತಾಯ, ಸಾಚಾರ್ ಸಮಿತಿಯ ಶಿಫಾರಸು ಮತ್ತು ಕೆ. ರೆಹಮಾನ್ ಖಾನ್ ನೇತೃತ್ವದ ಸಂಸತ್ ಸಮಿತಿ ಶಿಫಾರಸು ಆಧರಿಸಿ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ತಿದ್ದುಪಡಿ ಮಸೂದೆ ಅಂಗೀಕಾರವಾದಲ್ಲಿ ಆಸ್ತಿಯನ್ನು ವಶಕ್ಕೆ ತೆಗೆದುಕೊಳ್ಳಬೇಕು ಎಂದರೆ ವಕ್ಪ್ ಮಂಡಳಿಗೆ ಸರ್ಕಾರದ ದೃಢೀಕರಣ ಕಡ್ಡಾಯವಾಗಲಿದೆ.
ಮೂಲಗಳ ಪ್ರಕಾರ, ಪ್ರಸ್ತುತ ವಕ್ಫ್ ಬೋರ್ಡ್‌ಗಳು ಹೊಂದಿರುವ ಅನಿಯಂತ್ರಿತ ಅಧಿಕಾರವನ್ನು ಕಡಿಮೆ ಮಾಡುವ ಗುರಿಯನ್ನು ಪ್ರಾಥಮಿಕವಾಗಿ ಕಾಯಿದೆಯ ಕೆಲವು ಷರತ್ತುಗಳನ್ನು ರದ್ದುಗೊಳಿಸಲು ಮಸೂದೆ ಪ್ರಸ್ತಾಪಿಸುತ್ತದೆ. ವಕ್ಫ್ ಬೋರ್ಡ್ ಸಲ್ಲಿಸಿದ ಹಕ್ಕುಗಳು ಆಗಾಗ್ಗೆ ವಿವಾದಗಳಿಗೆ ಕಾರಣವಾಗುತ್ತವೆ. ಉದಾಹರಣೆಗೆ, ಸೆಪ್ಟೆಂಬರ್ 2022 ರಲ್ಲಿ, ತಮಿಳುನಾಡು ವಕ್ಫ್ ಬೋರ್ಡ್ ಇಡೀ ತಿರುಚೆಂದೂರೈ ಗ್ರಾಮದ ಮಾಲೀಕತ್ವವನ್ನು ಹೊಂದಿತ್ತು, ಅದು ಶತಮಾನಗಳಿಂದ ಬಹುಸಂಖ್ಯಾತ ಹಿಂದೂ ಜನಸಂಖ್ಯೆಯನ್ನು ಹೊಂದಿದೆ.
ಈ ಶಾಸನದ ಮೂಲಕ ಕೇಂದ್ರವು ಮಂಡಳಿಯ ನಿರಂಕುಶ ಪ್ರಭುತ್ವವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದೆ. ಬಿಲ್‌ನ ಕೆಲವು ಪ್ರಮುಖ ಮುಖ್ಯಾಂಶಗಳು ಹೆಚ್ಚು ಪಾರದರ್ಶಕ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಕಡ್ಡಾಯ ಪರಿಶೀಲನೆಯನ್ನು ಒಳಗೊಂಡಿವೆ.