ನವದೆಹಲಿ: ಕಳೆದ ನಾಲ್ಕು ತಿಂಗಳಿಂದ ಸರ್ಕಾರಿ ರೈಲ್ವೆ ಪೊಲೀಸ್ ಮತ್ತು ಇನ್ನಿತರ ಸಿಬ್ಬಂದಿ ಸಹಕಾರದೊಂದಿಗೆ ಕೇಂದ್ರ ರೈಲ್ವೆಯ ರೈಲ್ವೆ ರಕ್ಷಣಾ ಪಡೆಯು (ಆರ್‌ಪಿಎಫ್) ಇದುವರೆಗೆ ಸುಮಾರು 504 ಮಕ್ಕಳನ್ನು ರಕ್ಷಣೆ ಮಾಡಿದೆ.
ಜನವರಿ 2022 ರಿಂದ ಏಪ್ರಿಲ್ 2022 ರವರೆಗೆ “ಆಪರೇಷನ್ ನನ್ಹೆ ಫರಿಶ್ಟೆ” ಎಂಬ ಅಡಿಯಲ್ಲಿ ರೈಲ್ವೆ ರಕ್ಷಣಾ ಪಡೆ ಈ ಮಹಾನ್ ಕಾರ್ಯ ಕೈಗೊಳ್ಳುವ ಮೂಲಕ ಮಕ್ಕಳು ಪೋಷಕರ ಮಡಿಲು ಸೇರುವಂತೆ ಮಾಡಿದ್ದಾರೆ.
ರಕ್ಷಣೆ ಮಾಡಿದ 504 ಮಕ್ಕಳಲ್ಲಿ 330 ಹುಡುಗರು ಮತ್ತು 174 ಹುಡುಗಿಯರು ಇದ್ದು, ಇವರೆಲ್ಲಾ ಚೈಲ್ಡ್ ಲೈನ್ ನಂತಹ ಎನ್ ಜಿಒಗಳ ಸಹಾಯದಿಂದ ಮಕ್ಕಳು ತಮ್ಮ ತಂದೆ-ತಾಯಿಯ ಬಳಿ ಸೇರಿದ್ದಾರೆ. ಕೆಲವು ಕೌಟುಂಬಿಕ ಸಮಸ್ಯೆಗಳಿಂದಾಗಿ ಅಥವಾ ಉತ್ತಮ ಜೀವನ ಅಥವಾ ನಗರ ಜೀವನಕ್ಕೆ ಹಾತೊರೆದು ತಮ್ಮ ಕುಟುಂಬ ತೊರೆದು ರೈಲು ನಿಲ್ದಾಣಕ್ಕೆ ಬರುವ ಮಕ್ಕಳನ್ನು ಆರ್‌ಪಿಎಫ್ ಸಿಬ್ಬಂದಿ ರಕ್ಷಿಸಿ ಮಕ್ಕಳ ಬದುಕಿಗೆ ಬೆಳಕು ನೀಡುತ್ತಾರೆ.
ಮೊದಲು ಆರ್‌ಪಿಎಫ್ ಸಿಬ್ಬಂದಿ ಮಕ್ಕಳೊಂದಿಗೆ ಒಡನಾಡಿ ಬಳಿಕ ಅವರಿಂದ ಮಾಹಿತಿ ಪಡೆದು ಸಮಸ್ಯೆ ಅರ್ಥಮಾಡಿಕೊಳ್ಳುತ್ತಾರೆ. ಬಳಿಕ ವೈಯಕ್ತಿಕ ಮಾಹಿತಿ ಪಡೆದು ಕುಟುಂಬಕ್ಕೆ ಮಾಹಿತಿ ತಲುಪಿಸಿ ಮಕ್ಕಳನ್ನು ರಕ್ಷಿಸುತ್ತಾರೆ. ಇವರ ಈ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.
ಸೆಂಟ್ರಲ್ ರೈಲ್ವೆಯ ಮುಂಬೈ ವಿಭಾಗವು ಈ ವರ್ಷದ ಜನವರಿಯಿಂದ ಏಪ್ರಿಲ್ ವರೆಗೆ 206 ಹುಡುಗರು ಮತ್ತು 79 ಹುಡುಗಿಯರನ್ನು ಒಳಗೊಂಡಂತೆ 285 ಮಕ್ಕಳ ರಕ್ಷಣೆ ಮಾಡಿದ್ದು, ಅತಿ ಹೆಚ್ಚು ಮಕ್ಕಳ ರಕ್ಷಿಸಿದ ಖ್ಯಾತಿ ಸಲ್ಲುತ್ತದೆ. ಪುಣೆ ವಿಭಾಗವು ಇದುವರೆಗೆ 71 ಮಕ್ಕಳ ರಕ್ಷಣೆ ಮಾಡಿದ್ದು, (50 ಹುಡುಗರು ಮತ್ತು 21 ಹುಡುಗಿಯರು), ಭೂಸಾವಲ್ ವಿಭಾಗವು, (47 ಹುಡುಗರು ಮತ್ತು 45 ಹುಡುಗಿಯರು) 92 ಮಕ್ಕಳ ರಕ್ಷಿಸಿದ್ದಾರೆ. ನಾಗ್ಪುರ ವಿಭಾಗವು 32 ಮಕ್ಕಳು (12 ಹುಡುಗರು ಮತ್ತು 20 ಹುಡುಗಿಯರು), ಸೋಲಾಪುರ ವಿಭಾಗವು 24 ಮಕ್ಕಳನ್ನು (15 ಹುಡುಗರು ಮತ್ತು 9 ಹುಡುಗಿಯರು) ರಕ್ಷಿಸಿದ್ದಾರೆ.
ಕಳೆದ ವರ್ಷ 2021 ರ ಜನವರಿಯಿಂದ ಡಿಸೆಂಬರ್ ವರೆಗೆ, ಜಿಆರ್ ಪಿ ಮತ್ತು ಇತರ ರೈಲ್ವೆ ಸಿಬ್ಬಂದಿಗಳ ಸಮನ್ವಯದಲ್ಲಿ ಕೇಂದ್ರ ರೈಲ್ವೆ ಆರ್ ಪಿ ಎಫ್ 603 ಹುಡುಗರು ಮತ್ತು 368 ಹುಡುಗಿಯರು ಸೇರಿದಂತೆ 971 ಮಕ್ಕಳನ್ನು ರಕ್ಷಿಸಿದೆ.
ಅಲ್ಲದೆ, ದೇಶದಲ್ಲಿ ರೈಲ್ವೇಗಳ ಮೂಲಕ ನಡೆಯುತ್ತಿರುವ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವ ಮಾನವ ಕಳ್ಳಸಾಗಣೆಯನ್ನು ಕೊನೆಗೊಳಿಸುವ ಯೋಜನೆಗೆ ರೈಲ್ವೇಸ್ ಅಸೋಸಿಯೇಷನ್ ಫಾರ್ ವಾಲಂಟರಿ ಆಕ್ಷನ್ (AVA) ನೊಂದಿಗೆ ಎಂಒಯುಗೆ ಸಹಿ ಹಾಕಿದೆ. ನೋಬಲ್ ಪ್ರಶಸ್ತಿ ವಿಜೇತ ಕೈಲಾಶ್ ಸತ್ಯಾರ್ಥಿ ಅವರ ಮಕ್ಕಳ ಪ್ರತಿಷ್ಠಾನದೊಂದಿಗೆ ಸಂಬಂಧ ಹೊಂದಿರುವ ಈ ಸಂಘವನ್ನು ಬಚ್ಪನ್ ಬಚಾವೋ ಆಂದೋಲನ್ ಎಂದೂ ಕರೆಯುತ್ತಾರೆ. ರೈಲಿನ ಮೂಲಕ ಮಾನವ ಕಳ್ಳಸಾಗಣೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆರ್‌ಪಿಎಫ್ ಪಡೆಯು ಆಪರೇಷನ್ ಎ ಎ ಎಚ್ ಟಿ ಪ್ರಾರಂಭಿಸಿದೆ ಮತ್ತು ಮಾನವ ಕಳ್ಳಸಾಗಣೆಗೆ ಬಲಿಯಾದವರನ್ನು ಕಳ್ಳಸಾಗಣೆದಾರರ ಹಿಡಿತದಿಂದ ರಕ್ಷಿಸುತ್ತಿದೆ.