ಕೊರೊನಾ ವೈರಸ್ ಮೂರನೇ ಅಲೆ ಆರಂಭದ ಭಯ ಶುರುವಾಗಿದೆ. ದೇಶದಾದ್ಯಂತ ಕೊರೊನಾ ವೇಗ ಪಡೆದಿದೆ. ಕಳೆದ 6 ದಿನಗಳಿಂದ ಭಾರತದಲ್ಲಿ 40 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಕೊರೊನಾ ಹೆಚ್ಚಾಗ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಕಳೆದ 24 ಗಂಟೆಗಳಲ್ಲಿ, ಸುಮಾರು 47 ಸಾವಿರ ಹೊಸ ಕೊರೊನಾ ಪ್ರಕರಣ ದಾಖಲಾಗಿದೆ. ಕೇರಳದಿಂದ ಗರಿಷ್ಠ ಸಂಖ್ಯೆಯ ಪ್ರಕರಣಗಳು ವರದಿಯಾಗಿವೆ. 42 ಜಿಲ್ಲೆಗಳಲ್ಲಿ ಪ್ರತಿದಿನ 100 ಕ್ಕೂ ಹೆಚ್ಚು ಕೊರೊನಾ ಪ್ರಕರಣ ವರದಿಯಾಗ್ತಿದೆ ಎಂದು ಅವರು ಹೇಳಿದ್ದಾರೆ.
ಕೇರಳದಲ್ಲಿ ಮಾತ್ರ 1,00,000 ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 10,000 ದಿಂದ 1,00,000 ವರೆಗಿದೆ. ಇದೇ ಕಾರಣಕ್ಕೆ ಕೊರೊನಾ ಲಸಿಕೆ ವೇಗವನ್ನು ಹೆಚ್ಚು ಮಾಡಲಾಗಿದೆ ಎಂದವರು ಹೇಳಿದ್ದಾರೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ನಿರ್ದೇಶಕ ಬಲರಾಮ್ ಭಾರ್ಗವ ಕೂಡ ಜನರಿಗೆ ಮಹತ್ವದ ಸೂಚನೆ ನೀಡಿದ್ದಾರೆ. ಅಪಾಯ ಇನ್ನೂ ಕಡಿಮೆಯಾಗಿಲ್ಲ. ಲಸಿಕೆ ರೋಗದ ತೀವ್ರತೆ ಕಡಿಮೆ ಮಾಡುತ್ತದೆ. ಆದರೆ ಲಸಿಕೆ ನಂತರವೂ ಮಾಸ್ಕ್ ಅತ್ಯಗತ್ಯ. ಕೆಲವು ಜನರು ಅಸಡ್ಡೆ ತೋರಿಸುತ್ತಿದ್ದಾರೆ. ಆದ್ರೆ ನಿರ್ಲಕ್ಷ್ಯ ಸಲ್ಲದು. ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ಪೂರ್ಣಗೊಂಡಾಗ ಮಾತ್ರ ಮಾಸ್ಕ್ ನಿಂದ ಮುಕ್ತಿ ಸಿಗಲಿದೆ. ಹಬ್ಬದ ಸಂದರ್ಭದಲ್ಲಿ ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಿದ್ದಾರೆ.
ಹಬ್ಬದ ಋತು ಆರಂಭವಾಗಿದೆ. ಒಂದಾದ ಮೇಲೆ ಒಂದು ಹಬ್ಬ ಶುರುವಾಗ್ತಿದೆ. ಹಬ್ಬವನ್ನು ಮನೆಯಲ್ಲೇ ಆಚರಿಸಿ. ಗುಂಪು ಸೇರಿ ಕೊರೊನಾ ಹರಡಬೇಡಿ ಎಂದು ಅವರು ಮನವಿ ಮಾಡಿದ್ದಾರೆ. ಗರ್ಭಿಣಿಯರಿಗೆ ಕೊರೊನಾ ಹೆಚ್ಚಾಗ್ತಿದ್ದು, ಆದಷ್ಟು ಬೇಗ ಲಸಿಕೆ ಪಡೆಯುವಂತೆ ಸೂಚನೆ ನೀಡಿದ್ದಾರೆ.