ನವದೆಹಲಿ: ಕೇಂದ್ರ ಸರ್ಕಾರದಿಂದ ಪಿಂಚಣಿದಾರರಿಗೆ ಸರ್ಕಾರದಿಂದ ಶುಭ ಸುದ್ದಿ ನೀಡಲಾಗಿದೆ. 80 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಪಿಂಚಣಿದಾರರಿಗೆ ಇನ್ನು ಮುಂದೆ ಅನುಕಂಪದ ಭತ್ಯೆ ನೀಡಲಾಗುವುದು.
ಈ ಸಂಬಂಧ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ಇದರೊಂದಿಗೆ ಪಿಂಚಣಿ ವಿತರಣೆ ಪ್ರಕ್ರಿಯೆಗಳ ಸರಳೀಕರಣಕ್ಕೆ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ.
80 ರಿಂದ 85 ವರ್ಷದ ಪಿಂಚಣಿದಾರರು ತಮ್ಮ ಮೂಲವೇತನದ ಶೇಕಡ 20ರಷ್ಟು ಮೊತ್ತವನ್ನು ಅನುಕಂಪ ಭತ್ಯೆ ರೂಪದಲ್ಲಿ ಹೆಚ್ಚುವರಿಯಾಗಿ ಪಡೆಯಲಿದ್ದಾರೆ.
90 ರಿಂದ 95 ವರ್ಷದ ಪಿಂಚಣಿದಾರರಿಗೆ ಶೇಕಡ 40ರಷ್ಟು ಅನುಕಂಪದ ಭತ್ಯೆ ನಿಗದಿಪಡಿಸಲಾಗಿದೆ.
95ರಿಂದ 100 ವರ್ಷ ವಯೋಮಿತಿಯ ಪಿಂಚಣಿದಾರರಿಗೆ ಮೂಲವೇತನದ ಶೇಕಡ 50ರಷ್ಟು, ಶತಾಯುಷಿಗಳು ತಮ್ಮ ಮೂಲವೇತನದ ಶೇಕಡ 100ರಷ್ಟು ಹೆಚ್ಚುವರಿ ಮೊತ್ತವನ್ನು ಭತ್ಯೆಯಾಗಿ ಪಡೆಯಲಿದ್ದಾರೆ.
ನಿಗದಿತ ವಯಸ್ಸಿಗೆ ಕಾಲಿರಿಸಿದ ಮೊದಲ ದಿನದಿಂದಲೇ ಹೆಚ್ಚುವರಿ ಭತ್ಯೆಗೆ ಪಿಂಚಣಿದಾರರು ಅರ್ಹತೆ ಪಡೆದುಕೊಳ್ಳಲಿದ್ದಾರೆ. ಪಿಂಚಣಿ ವಿತರಣೆ ವಿಳಂಬ ತಪ್ಪಿಸಲು ಹೊಸ ಬದಲಾವಣೆ ಬಗ್ಗೆ ಎಲ್ಲಾ ಇಲಾಖೆಗಳು ಮತ್ತು ಬ್ಯಾಂಕುಗಳಿಗೆ ಮಾಹಿತಿ ನೀಡಲಾಗಿದೆ ಎಂದು ಹೇಳಲಾಗಿದೆ.