ಚಿತ್ರದುರ್ಗ ತಾಲೂಕಿನ ಇಂಗಳದಾಳದಲ್ಲಿ ಚಿನ್ನದ ಗಣಿಗಾರಿಕೆ ಪುನಾರಂಭಿಸಲು ಕೇಂದ್ರ ಸರ್ಕಾರ ಸ್ಪಂದಿಸಿದೆ. ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರ ಮನವಿಗೆ ಕೇಂದ್ರ ಗಣಿಗಾರಿಕೆ ಸಚಿವ ಜಿ. ಕಿಶನ್ ರೆಡ್ಡಿ ಸ್ಪಂದಿಸಿದ್ದು, ಚಿನ್ನದ ಗಣಿಗಾರಿಕೆ ಘಟಕ ಪುನಾರಂಭಿಸಲು ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಶಾಸಕ ವೀರೇಂದ್ರ ಸೆ.9 ರಂದು ಮನವಿ ಮಾಡಿದ್ದರು. ಅಜ್ಜನಹಳ್ಳಿ ಮತ್ತು ಜಿಆರ್ ಹಳ್ಳಿ ಸುತ್ತಮುತ್ತ ಉತ್ತಮ ಪ್ರಮಾಣದಲ್ಲಿ ಚಿನ್ನದ ನಿಕ್ಷೇಪವಿದ್ದು, ಚಿನ್ನದ ಗಣಿಗಾರಿಕೆಗೆ ಸೂಕ್ತವಾಗಿದೆ ಎಂದು ಗಣಿ ತಜ್ಞರು, ಭೂ ವಿಜ್ಞಾನಿಗಳು ತಿಳಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಗಣಿಗಾರಿಕೆ ಘಟಕ ಮತ್ತೆ ಆರಂಭಿಸುವಂತೆ ಶಾಸಕರು ಮನವಿ ಮಾಡಿದ್ದರು.
ಹೆಚ್.ಡಿ. ಕುಮಾರಸ್ವಾಮಿ ಈ ಕುರಿತು ಪತ್ರ ಬರೆದು, ಅಗತ್ಯ ಕ್ರಮ ಕೈಗೊಳ್ಳಲು ಕಲ್ಲಿದ್ದಲು ಮತ್ತು ಗಣಿಗಾರಿಕೆ ಸಚಿವ ಜಿ. ಕಿಶನ್ ರೆಡ್ಡಿಗೆ ಮನವಿ ಮಾಡಿದ್ದರು. 1886 ರಲ್ಲಿ ಇಂಗಳದಾಳಿನಲ್ಲಿ ತಾಮ್ರದ ಗಣಿಗಾರಿಕೆ ಆರಂಭವಾಗಿತ್ತು. ನಂತರ ಚಿನ್ನದ ನಿಕ್ಷೇಪ ಇರುವುದನ್ನು ಗುರುತಿಸಿ 1994 ರಲ್ಲಿ ಅಜ್ಜನಹಳ್ಳಿ ಮತ್ತು ಜಿಆರ್ ಹಳ್ಳಿ ಸುತ್ತಮುತ್ತ ಚಿನ್ನದ ನಿಕ್ಷೇಪ ಇರುವುದನ್ನು ಖಚಿತಪಡಿಸಿಕೊಂಡು ಹಟ್ಟಿ ಚಿನ್ನದ ಗಣಿಯ ಸಹಯೋಗದಲ್ಲಿ 2002ರವರೆಗೆ ಗಣಿಗಾರಿಕೆ ನಡೆಸಲಾಗಿತ್ತು.