ಕೋವಿಡ್-19 ಸಾಂಕ್ರಮಿಕದ ಅನಿಶ್ಚಿತತೆಗಳ ಹಿನ್ನೆಲೆಯಲ್ಲಿ ಕುಟುಂಬ ಪಿಂಚಣಿ ನಿಯಮಗಳನ್ನು ಕೇಂದ್ರ ಸರ್ಕಾರ ಇನ್ನಷ್ಟು ಸರಳೀಕರಿಸಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಹೊಸ ಕೌಟುಂಬಿಕ ಪಿಂಚಣಿ ನಿಯಮಾನುಸಾರ, ಕೌಟುಂಬಿಕ ಪಿಂಚಣಿಗೆ ಅರ್ಜಿ ಸಲ್ಲಿಸಿದ ಕೂಡಲೇ ಅಥವಾ ಸಂಬಂಧಪಟ್ಟ ಕುಟುಂಬದ ಅರ್ಹ ಸದಸ್ಯರ ಮರಣ ಪ್ರಮಾಣ ಪತ್ರ ಸಲ್ಲಿಸುತ್ತಲೇ ಸಾಂದರ್ಭಿಕ ಪಿಂಚಣಿ ಬಿಡುಗಡೆ ಮಾಡಲಾಗುವುದು. ಹಿಂದಿನಂತೆ ಪಾವತಿ ಮತ್ತು ಅಕೌಂಟ್ ಕಾರ್ಯಾಲಯಕ್ಕೆ ಕೌಟುಂಬಿಕ ಪಿಂಚಣಿಯ ಪ್ರಕರಣವನ್ನು ತರಬೇಕಾದ ಅಗತ್ಯ ಈಗ ಇಲ್ಲ.
ಕೋವಿಡ್‌ನಿಂದ ಅಥವಾ ಮತ್ಯಾವುದೇ ಕಾರಣದಿಂದ ಉಂಟಾಗುವ ಸಾವಿಗೆ ಈ ಹೊಸ ನಿಯಮಗಳು ಅನ್ವಯವಾಗಲಿವೆ ಎಂದು ಸಚಿವರು ತಿಳಿಸಿದ್ದಾರೆ.
ಸಾಂದರ್ಭಿಕ ಪಿಂಚಣಿಯ ಪಾವತಿಯನ್ನು ನಿವೃತ್ತಿಯಾದ ಒಂದು ವರ್ಷದವರೆಗೂ ವಿಸ್ತರಿಸುವ ಅವಕಾಶವನ್ನು ಹೊಸ ತಿದ್ದುಪಡಿ ಮೂಲಕ ತರಲಾಗಿದ್ದು, ಇದಕ್ಕೆ ಪಿಂಚಣಿ & ಲೆಕ್ಕಾಚಾರ ಕಾರ್ಯಾಲಯ ಹಾಗೂ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರ ಅನುಮೋದನೆ ದೊರಕಬೇಕಿದೆ. ಇಲ್ಲಿಯವರೆಗೂ, 1972ರ ಸಿಸಿಎಸ್ (ಪಿಂಚಣಿ)ಯ 64ನೇ ನಿಯಮಾನುಸಾರ, ಸಾಂದರ್ಭಿಕ ಪಿಂಚಣಿಯನ್ನು ಆರು ತಿಂಗಳ ಮಟ್ಟಿಗೆ ಕೊಡುವ ಅವಕಾಶವಿತ್ತು.