ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆಯ ಅಂಗ ಸಂಸ್ಥೆ ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಅಂಡ್ ಕ್ಯಾನ್ಸರ್ ವರದಿಯಲ್ಲಿ ಅಡಿಕೆ ಕ್ಯಾನ್ಸರ್ ಕಾರಕ ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ರಕ್ಷಣೆಗೆ ಕ್ರಮ ಕೈಗೊಂಡಿದೆ. ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಅಡಿಕೆ ಮತ್ತು ಮಾನವ ಆರೋಗ್ಯ ಕುರಿತಂತೆ ಸಾಕ್ಷ್ಯ ಆಧಾರಿತ ಸಂಶೋಧನೆ ಕೈಗೊಂಡಿದೆ. ಈ ಮೂಲಕ ಅಡಿಕೆ ಬಗ್ಗೆ ಉಂಟಾದ ಗೊಂದಲ ನಿವಾರಣೆಗೆ ಮುಂದಾಗಿದ್ದು, ಆರೋಗ್ಯದ ಮೇಲೆ ಅಡಿಕೆ ಬೀರುವ ಪರಿಣಾಮ ಅರಿತುಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ.
ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತಾನ್ ಅವರು ಲೋಕಸಭೆಯಲ್ಲಿ ಮಂಗಳವಾರ ಕೇಳಿದ ಪ್ರಶ್ನೆಗೆ ಕೇಂದ್ರ ಕೃಷಿ ಖಾತೆ ಸಹಾಯಕ ಸಚಿವ ಭಗೀರಥ್ ಚೌಧರಿ ಲಿಖಿತ ಉತ್ತರ ನೀಡಿದ್ದಾರೆ.
16 ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಸಂಸ್ಥೆಗಳು ಸಂಶೋಧನೆ ಕೈಗೊಂಡಿವೆ. ಇದರಲ್ಲಿ ಅಖಿಲ ಭಾರತ ವೈದ್ಯವಿಜ್ಞಾನ ಸಂಸ್ಥೆ, ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆ, ಭಾರತೀಯ ವಿಜ್ಞಾನ ಸಂಸ್ಥೆ ಕೂಡ ಸೇರಿದ್ದು, ಅಡಿಕೆ ಬಗ್ಗೆ ವೈದ್ಯಕೀಯ ಅಧ್ಯಯನದಲ್ಲಿ ಸಂಶೋಧನೆಯಲ್ಲಿ ತೊಡಗಿಸಲಾಗಿದೆ.
ಅಡಿಕೆಯನ್ನು ವೀಳ್ಯದೆಲೆ ಜೊತೆಗೆ, ಸುಪಾರಿ ರೂಪದಲ್ಲಿ, ತಾಂಬೂಲ ರೂಪದಲ್ಲಿ ಸೇವಿಸಲಾಗುತ್ತದೆ. ಆಯುರ್ವೇದ ಔಷಧಕ್ಕೆ ಬಳಸಲಾಗುತ್ತದೆ. ಅದರಲ್ಲಿರುವ ಅಲ್ಕಲಾಯ್ಡ್ ಅಂಶದಿಂದ ಇದು ಸಾಧ್ಯವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಣೆಯಿಂದಾಗಿ ಕೃಷಿಕರು ಎದುರಿಸುತ್ತಿರುವ ಆತಂಕದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಅರಿವಿದೆ. ವಿಶ್ವ ಆರೋಗ್ಯ ಸಂಸ್ಥೆ ವ್ಯಾಖ್ಯಾನಿಸಿದ ವರದಿಗಳಿಗೆ ಅನೇಕ ಮಿತಿಗಳಿವೆ. ಇದಕ್ಕಾಗಿ ಸಮಗ್ರ ಅಧ್ಯಯನ ನಡೆಸಲು ತೀರ್ಮಾನಿಸಲಾಗಿದೆ ಎಂದು ಲಿಖಿತ ಉತ್ತರ ನೀಡಿದ್ದಾರೆ.