ನವದೆಹಲಿ: ಕೇಂದ್ರ ಸರ್ಕಾರ ಸೆಪ್ಟೆಂಬರ್ ನಿಂದ ಜನಗಣತಿಯನ್ನು ಆರಂಭಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ದೇಶದ ಜನಗಣತಿ ಪ್ರಕ್ರಿಯೆ ಬಹುಕಾಲ ಅನೇಕ ವರ್ಷಗಳು ನನೆಗುದಿಗೆ ಬಿದ್ದಿದೆ. 2011ರಲ್ಲಿ ಕೊನೆಯ ಬಾರಿಗೆ ಜನಗಣತಿ ನಡೆಸಲಾಗಿತ್ತು. 10 ವರ್ಷಗಳ ನಂತರ 2021ರಲ್ಲಿ ಜನಗಣತಿ ನಡೆಸಬೇಕಿತ್ತು. ಆದರೆ, ಕೊರೊನಾ ಕಾರಣದಿಂದಾಗಿ ಜನಗಣತಿಯನ್ನು ಮುಂದೂಡಲಾಗಿತ್ತು. ಸೆಪ್ಟೆಂಬರ್ ನಲ್ಲಿ ಜನಗಣತಿ ಪ್ರಕ್ರಿಯೆ ಆರಂಭವಾಗಲಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು 18 ತಿಂಗಳು ಬೇಕಾಗಬಹುದು. 2026ರ ಮಾರ್ಚ್ ವೇಳೆಗೆ ಜನಗಣತಿ ವರದಿ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.
ಜನಗಣತಿ ವಿಳಂಬ ವಿಚಾರವಾಗಿ ಸರ್ಕಾರವನ್ನು ಪ್ರತಿಪಕ್ಷಗಳು ತರಾಟೆಗೆ ತೆಗೆದುಕೊಂಡಿದ್ದವು. ಅಲ್ಲದೆ, ಆರ್ಥಿಕ ತಜ್ಞರು, ನೀತಿ ನಿರೂಪಕರು ಕೂಡ ಜನಗಣತಿ ವಿಳಂಬದ ಬಗ್ಗೆ ಟೀಕಿಸಿದ್ದರು. ಪ್ರಸ್ತುತ ಸರ್ಕಾರದ ಎಲ್ಲಾ ಯೋಜನೆಗಳು 2011ರ ಜನಗಣತಿಯ ಅಂಕಿ ಅಂಶಗಳನ್ನು ಆಧರಿಸಿವೆ.
ಜನಗಣತಿಯ ವಿಳಂಬ ಆರ್ಥಿಕ ಡೇಟಾ, ಹಣದುಬ್ಬರ ಮತ್ತು ಉದ್ಯೋಗಗಳ ಅಂದಾಜುಗಳು ಸೇರಿದಂತೆ ಅನೇಕ ಇತರ ಅಂಕಿಅಂಶಗಳ ಸಮೀಕ್ಷೆಗಳ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಜನಗಣತಿಗೆ ಹೆಚ್ಚಿನ ಒತ್ತಾಯ ಇರುವುದರಿಂದ ಸೆಪ್ಟಂಬರ್ ನಿಂದ ಜನಗಣತಿಯನ್ನು ಆರಂಭಿಸಲು ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿದೆ.