![](https://kannadadunia.com/wp-content/uploads/2023/02/jail-1144534-1663003237-1147017-1663761700-1193068-1676878173.jpg)
ಬೆಂಗಳೂರು: ಜೈಲಿನಿಂದಲೇ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ ಪ್ರಕರಣಗಳಿಗೆ ಬ್ರೇಕ್ ಬೀಳಲಿದೆ. ಕಾರಾಗೃಹಗಳಲ್ಲಿ ಟವರ್ ಫಾರ್ ಹಾರ್ಮೊನಿಸ್ ಕಾಲ್ ಬ್ಲಾಕಿಂಗ್ ಸಿಸ್ಟಮ್ -ಟಿ.ಹೆಚ್.ಸಿ.ಬಿ. ಟವರ್ ಅಳವಡಿಕೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.
ರಾಜ್ಯದ ಕಾರಾಗೃಹ ಮತ್ತು ಸುಧಾರಣೆ ಇಲಾಖೆಯಿಂದ ಈ ಕುರಿತಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರ ಅಸ್ತು ಎಂದಿದೆ. ತಿಹಾರ್ ಜೈಲಿನ ಮಾದರಿಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿಯೂ ಟಿ.ಹೆಚ್.ಸಿ.ಬಿ. ಟವರ್ ಅಳವಡಿಸಲಾಗುವುದು. ಜೈಲಿನಿಂದ ಮೊಬೈಲ್ ಕರೆ ಹೋಗದಂತೆ ನಿರ್ಬಂಧ ಹೇರಲಾಗುವುದು. ಮೊಬೈಲ್ ಜಾಮರ್ ಗಳಿಗಿಂತಲೂ ಸುಧಾರಿತ ಟೆಕ್ನಾಲಜಿ ವ್ಯವಸ್ಥೆ ಅಳವಡಿಸಲಾಗುತ್ತದೆ. ವಿವಿಧ ಮೊಬೈಲ್ ನೆಟ್ವರ್ಕ್ ಕಂಪನಿಗಳ ಆಂಟೆನಾ ಅಳವಡಿಸಲಿದ್ದು, ಈ ಮೂಲಕ ಮೊಬೈಲ್ ಗಳ ಸಂಪರ್ಕ ಸಿಗದಂತೆ ನಿರ್ಬಂಧ ಹೇರಲಾಗುತ್ತದೆ. ಪರಪ್ಪನ ಅಗ್ರಹಾರ ಕಾರಾಗೃಹ ಆವರಣದಲ್ಲಿ 4.5 ಕೋಟಿ ರೂಪಾಯಿ ವೆಚ್ಚದಲ್ಲಿ ಮೂರು ಟಿ.ಹೆಚ್.ಸಿ.ಬಿ. ಟವರ್ ಸ್ಥಾಪನೆಗೆ ಒಪ್ಪಿಗೆ ನೀಡಲಾಗಿದೆ.
ಅಪರಾಧ ಪ್ರಕರಣಗಳ ಹಿನ್ನೆಲೆ ಉಳ್ಳವರು, ವಿಚಾರಣಾಧೀನ ಕೈದಿಗಳು, ರೌಡಿಶೀಟರ್ ಗಳು ಜೈಲಿನಿಂದಲೇ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ ಪ್ರಕರಣಗಳು, ಮೊಬೈಲ್ ಮೂಲಕ ಡೀಲ್ ನಡೆಸುತ್ತಿದ್ದ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನಿಂದ ಈ ಹಿಂದೆ ಅನೇಕ ಕರೆಗಳು ಹೋಗಿದ್ದವು. ಕಳೆದ ಜನವರಿಯಲ್ಲಿ ಬೆಳಗಾವಿಯ ಹಿಂಡಲಗಾ ಜೈಲಿನಿಂದಲೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆದರಿಕೆ ಕರೆ ಮಾಡಲಾಗಿತ್ತು. ಪ್ರಕರಣವನ್ನು ಕಾರಾಗೃಹ ಮತ್ತು ಸುಧಾರಣಾ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಬೆದರಿಕೆ ಕರೆಗಳಿಗೆ ತಡೆಯೊಡ್ಡಲು ಟಿ.ಹೆಚ್.ಸಿ.ಬಿ. ಟವರ್ ಅಳವಡಿಕೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಜೈಲಿನ ಸಿಬ್ಬಂದಿ ಮೊಬೈಲ್ ಗೆ ಸಿಗ್ನಲ್ ಲಭ್ಯ ಇರುವುದಿಲ್ಲ. ಜೈಲಿನಲ್ಲಿ ಲ್ಯಾಂಡ್ ಲೈನ್ ಮೂಲಕ ಮಾತ್ರ ಸಂಪರ್ಕಕ್ಕೆ ಅವಕಾಶ ಇರುತ್ತದೆ.