ಬೆಂಗಳೂರು: ಶಾಸಕ ರಮೇಶ ಜಾರಕಿಹೊಳಿ ಅವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರೋಚಕ ಹಂತ ತಲುಪುವ ಸಾಧ್ಯತೆ ಇದೆ.
ಇಂದು ಯುವತಿ ಕೋರ್ಟ್ ಗೆ ಹಾಜರಾಗಿ ಹೇಳಿಕೆ ನೀಡಲಿದ್ದಾರೆ ಎಂದು ಹೇಳಲಾಗಿದ್ದು, ರಮೇಶ ಜಾರಕಿಹೊಳಿ ಇವತ್ತು ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ. ನಿರೀಕ್ಷಣಾ ಜಾಮೀನು ಕೋರಿ ಅವರು ಕೋರ್ಟ್ ಗೆ ಅರ್ಜಿ ಸಲ್ಲಿಸಬಹುದು ಎನ್ನಲಾಗಿದೆ.
ಇಂದು ಜಡ್ಜ್ ಎದುರು ಯುವತಿ ಹೇಳಿಕೆ ನೀಡುವ ಸಾಧ್ಯತೆ ಹಿನ್ನೆಲೆಯಲ್ಲಿ ತಡರಾತ್ರಿಯವರೆಗೂ ಆಪ್ತರು ಮತ್ತು ವಕೀಲರೊಂದಿಗೆ ರಮೇಶ್ ಜಾರಕಿಹೊಳಿ ಚರ್ಚೆ ನಡೆಸಿದ್ದಾರೆ. ಯುವತಿ ನೀಡುವ ಹೇಳಿಕೆ ವಿರುದ್ಧವಾಗಿದ್ದರೆ ಮುಂದಿನ ನಡೆಯ ಬಗ್ಗೆ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
ಯುವತಿ ಎಸ್ಐಟಿ ನೋಟಿಸ್ ಗಳಿಗೆ ಉತ್ತರ ನೀಡಿಲ್ಲ. ಇಂದು ಕೋರ್ಟ್ ಹಾಜರಾಗಬಹುದು ಇಲ್ಲವೇ ಎಸ್ಐಟಿ ಎದುರು ಹಾಜರಾಗಬಹುದು. ಎಸ್ಐಟಿ ಮೇಲೆ ನಂಬಿಕೆ ಇಲ್ಲವೆಂದು ಈಗಾಗಲೇ ಹೇಳಿರುವುದರಿಂದ ಕೋರ್ಟ್ ಗೆ ಹಾಜರಾಗಿ ಹೇಳಿಕೆ ಕೊಡಬಹುದು ಎನ್ನಲಾಗಿದೆ.