ರಮೇಶ್ ಜಾರಕಿಹೊಳಿ ನೀಡಿದ ದೂರಿನಲ್ಲಿ ನನ್ನ ಹೆಸರಿಲ್ಲ. ಪಿಜಿಯಲ್ಲಿ ಪರಿಶೀಲನೆ ಮಾಡಿ ಸಾಕ್ಷ್ಯ ನಾಶ ಮಾಡಿದ್ದಾರೆ ಎಂದು ಆರೋಪಿಸಿ ಸಿಡಿ ಪ್ರಕರಣದ ಯುವತಿ ಬೆಂಗಳೂರು ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಆರೋಪಿತರು ಮುಕ್ತವಾಗಿ ಓಡಾಡಲು ಎಸ್ಐಟಿ ಅವಕಾಶ ನೀಡಿದ್ದು, ನನಗೆ ಒಂದು ದಿನವೂ ಬಿಡದೆ ವಿಚಾರಣೆ ನಡೆಸಲಾಗಿದೆ ಎಂದು ದೂರಿದ್ದಾರೆ. ನನ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಇದುವರೆಗೂ ನನ್ನನ್ನು ತೇಜೋವಧೆ ಮಾಡುವ, ನನ್ನ ವಿರುದ್ಧ ಕಪೋಲಕಲ್ಪಿತ ವಿಷಯಗಳು ಪ್ರಸಾರವಾಗುತ್ತಿವೆ. ನಾನು ಪ್ರಕರಣದ ದೂರುದಾರರಾಗಿದ್ದರೂ ನನ್ನ ಚಾರಿತ್ರ್ಯವಧೆ ಮಾಡುವ ಷಡ್ಯಂತ್ರ ನಡೆಸಲಾಗಿದೆ ಎಂದು ಯುವತಿ ದೂರಿದ್ದಾರೆ.
ಸಿಎಂ ಯಡಿಯೂರಪ್ಪ ವಿರುದ್ಧವೇ ಸಂತ್ರಸ್ತ ಯುವತಿ ಆರೋಪ ಮಾಡಿದ್ದು, ರಮೇಶ ಜಾರಕಿಹೊಳಿ ಆರೋಪ ಮುಕ್ತರಾಗಿ ಬರುತ್ತಾರೆ ಎಂಬ ಸಿಎಂ ಹೇಳಿಕೆ ನನಗೆ ತೀವ್ರ ಆತಂಕ ಮೂಡಿಸಿದೆ. ನನ್ನ ಸಹಮತ ಪಡೆಯದೆ ಪಿಪಿ ನೇಮಕ ಮಾಡಲಾಗಿದೆ. ಇಡೀ ಪ್ರಕರಣ ನಿಷ್ಪಕ್ಷಪಾತವಾಗಿ ತನಿಖೆ ನಡೆಯುತ್ತಿಲ್ಲ. ಈ ಪ್ರಕರಣದ ತನಿಖೆಯ ಮೇಲೆ ನನಗೆ ನಂಬಿಕೆ ಇಲ್ಲವಾಗಿದೆ. ಸರ್ಕಾರದ ಒತ್ತಡಕ್ಕೆ ಮಣಿಯದೆ ನನಗೆ ನ್ಯಾಯ ಕೊಡಿಸಿ. ನ್ಯಾಯಸಮ್ಮತ ವಿಚಾರಣೆ ನಡೆಸಬೇಕು ಎಂದು ಯುವತಿ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.